ವಿವಿ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ

ತುಮಕೂರು, ಮೇ ೩೦- ಪಠ್ಯೇತರ ಚಟುವಟಿಕೆಗಳು ಆತ್ಮವಿಶ್ವಾಸವನ್ನು ಬಲಗೊಳಿಸುವ ಮೂಲಕ ಒಬ್ಬರಲ್ಲಿರುವ ವಿಶೇಷ ಕಲಾಸಕ್ತಿಯನ್ನುಜಗತ್ತಿಗೆ ಪರಿಚಯಿಸುತ್ತವೆ ಎಂದು ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಅರುಣ್‌ಕುಮಾರ್ ಡಿ. ಬಿ. ಹೇಳಿದರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ವತಿಯಿಂದ ಏರ್ಪಡಿಸಿರುವ ೨೦೨೪ನೇ ಸಾಲಿನ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲೆ ಬದುಕಿನ ವಿವಿಧ ಬಣ್ಣಗಳನ್ನು ಅನಾವರಣಗೊಳಿಸುತ್ತದೆ. ಓದಿಗಷ್ಟೇ ಸೀಮಿತವಾಗದೆ, ನಮ್ಮಲ್ಲಿರುವ ಅನನ್ಯ ಕಲಾಸಕ್ತಿಯನ್ನು ಅಭಿವ್ಯಕ್ತಗೊಳಿಸಬೇಕು ಎಂದರು.
ಮೊದಲ ದಿನ, ಸ್ವರಚಿತ ಕವನ ವಾಚನ, ಸ್ಪಾಟ್‌ಫೋಟೋಗ್ರಫಿ, ಕ್ಯಾಂಪಸ್ ಫೋಟೋಗ್ರಫಿ, ಸ್ಪಾಟ್ ಪೇಂಟಿಂಗ್, ಮೆಹಂದಿ, ಬೆಂಕಿ ರಹಿತ ಅಡುಗೆ- ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಎರಡನೆಯ ಹಾಗೂ ಮೂರನೆಯ ದಿನ, ‘ಹವಾಮಾನ ಬದಲಾವಣೆಯ ಸವಾಲಿಗೆ ಸ್ಥಳೀಯ ಮಟ್ಟದ ಪರಿಹಾರಗಳು’ ಕುರಿತು ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ವಿಜ್ಞಾನ ರಸಪ್ರಶ್ನೆ, ಏಕಪಾತ್ರಾಭಿನಯ, ಕಿರುನಾಟಕ ಹಾಗೂ ಗಾಯನ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ವಿವಿ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ.ವೆಂಕಟರೆಡ್ಡಿರಾಮರೆಡ್ಡಿ, ಸದಸ್ಯ ಡಾ. ನರೇಂದ್ರ ಎನ್., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕ ಡಾ. ರಾಮಕೃಷ್ಣ ಜಿ., ಡಾ. ನಾಗಭೂಷಣ ಬಗ್ಗನಡು ಮತ್ತಿತರರುಉಪಸ್ಥಿತರಿದ್ದರು.