ವಿವಿ ನಿರ್ಣಯ ವಿರುದ್ಧ ಎ.ಬಿ.ವಿ.ಪಿ ಪ್ರತಿಭಟನೆ

ಬೀದರ:ಏ.7: ಗುಲ್ಬರ್ಗಾ ವಿಶ್ವವಿದ್ಯಾಲಯದ ಗೊಂದಲದ ನಿರ್ಣಯಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿ ನಂತರ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತದ ಅಧಿಕಾರಿಗೆ ಸಲ್ಲಿಸಿದರು. ಖಾಸಗಿ ವಿವಿಗಳು ಆಧುನಿಕ ತಂತ್ರಜ್ಞಾನದೊಂದಿಗೆ ತಲೆ ಎತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ವಿವಿಗಳು ಮೂಲಭೂತ ಸೌಕರ್ಯಗಳಿಲ್ಲದೇ ವಂಚಿತವಾಗುತ್ತಿರುವುದು ಶೋಚನೀಯ. ಉನ್ನತ ಗುಣಮಟ್ಟದ ಶಿಕ್ಷಣದ ಜ್ಞಾನ ಸರ್ವರಿಗೂ ಸಿಗುವಂತಾಗಲಿ ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಅನೇಕ ವಿವಿಗಳು ಪ್ರಾರಂಭಿಸಲಾಯಿತು.ಆದರೆ, ಗುಲ್ಬರ್ಗಾ ವಿವಿಯಲ್ಲಿ ಅದು ಮರೀಚಿಕೆಯಾದಂತಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರಮುಖ ಬೇಡಿಕೆಗಳು: ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್‌ ಪಾಸ್‌ ಆದಲ್ಲಿ ಮಾತ್ರ 5ನೇ ಸೆಮಿಸ್ಟರ್‌ ಪರೀಕ್ಷೆಗೆ ಅನುಮತಿ ನಿಡಲಾಗುವುದು ಎನ್ನುವ ಸುತ್ತೋಲೆ ಹಿಂಪಡೆಯಬೇಕು. ವಿದ್ಯಾರ್ಥಿಗಳಿಗೆ ಪರಿಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಆನ್‌ಲೈನ್‌ ಸ್ಟೂಡೆಂಟ್‌ ಪೋರ್ಟಲ್‌ ವಿನಾಕಾರಣ ಬ್ಲಾಕ್‌ ಮಾಡಲಾಗಿದ್ದು, ತಕ್ಷಣ ಅದನ್ನು ಓಪನ್‌ ಮಾಡಿಸಬೇಕು. ಪ್ರತಿ ಬಾರಿ ವಿವಿಯಲ್ಲಿ ವಿನಾಕಾರಣ ಕೆಲ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗುತ್ತಿದೆ. ನಂತರ ನೇರವಾಗಿ ವಿವಿಗೆ ಹೋಗಿ ಹಣ ನೀಡಿದರೆ ಫಲಿತಾಂಶ ಪ್ರಕಟವಾಗುತ್ತದೆ ಎನ್ನುವ ಭ್ರಷ್ಟಾಚಾರ ಅರೋಪವೂ ವಿವಿ ಮೇಲಿದೆ. ಈ ವಿಷಯ ಗಂಬೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಗಿದೆ.

ಕಳೆದ 20 ವರ್ಷಗಳಿಂದ ವಿವಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಬಹುತೇಕ ವಿಭಾಗಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿಸಿವೆ. ಇದರಿಂದ ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಹೀಗೆ ಎಲ್ಲ ಹಂತದಲ್ಲೂ ತೊಂದರೆ ಅನುಭವಿಸಬೇಕಾಗಿದೆ. ಕೂಡಲೇ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ವಿವಿಯ ಅಂಕಪಟ್ಟಿ ಟೆಂಡರ್‌ ಅವ್ಯವಹಾರದಲ್ಲಿ ಭಾಗಿಯಾದವರನ್ನು ಸೇವೆಯಿಂದ ಅಮಾನತು ಮಾಡಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ವಿವಿಯಲ್ಲಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವದರೊಂದಿಗೆ ವಿವಿ ಶಿಕ್ಷಣದ ಗುಣಮಟ್ಟ ಕಾಪಾಡುವಂತಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿವಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್‌, ನಗರ ಕಾರ್ಯದರ್ಶಿ ಪ್ರದೀಪ ರೆಡ್ಡಿ, ಪ್ರಮುಖರಾದ ಅರವಿಂದ ಸುಂದಳಕರ, ಅಮರ ಸುಲ್ತಾನಪೂರೆ, ಸಾಯಿ ಮೂಲಗೆ, ಸುನೀಲ ಉಪ್ಪೆ, ಸೂರ್ಯಕಾಂತ ಸೇರಿದಂತೆ ಇತರರು ಇದ್ದರು.