
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.19: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರುದ್ರ ಭೂಮಿ ಮತ್ತು ವಿದ್ಯುತ್ ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರನ್ನು ವಿವಿಧ ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ನಗರದ ನಾರಾಯಾಣರಾವ್ ಪಾರ್ಕ್ ಬಳಿ ಸೇರಿದ ಮಸಣ ಕಾರ್ಮಿಕರು ಜಾಥಾ ಮೂಲಕ ಪಾಲಿಕೆಗೆ ಆಗಮಿಸಿ ಮನವಿ ಸಲ್ಲಿಸಿದರು.
ನಾವು ಹಲವಾರು ತಲೆಮಾರುಗಳಿಂದ ಮಸಣ ಕಾರ್ಮಿಕರಾಗಿ ಕೆಲಸ ಮಾಡುತ್ತ ಬಂದಿದ್ದೇವೆ. ಮಸಣಗಳಲ್ಲಿ ಕುಣಿತಗೆದು ಹೆಣ ಇಟ್ಟ ಮೇಲೆ ಮುಚ್ಚುವ ಕೆಲಸವನ್ನು ಮಾಡುತ್ತೇವೆ. ಅವರು ಕೊಡುವ ಬಿಡಿಗಾಸಿನಿಂದ ನಮ್ಮ ಕುಟುಂಬ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.
ಹಿಂದಿನ ಸರಕಾರದ ಸಮಾಜ ಕಲ್ಯಾಣ ಸಚಿವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಅಧ್ಯಕ್ಷತೆಯಲ್ಲಿ ಮಸಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರ ವಿವರ ಮತ್ತು ಕುಂದು ಕೊರತೆ ಕುರಿತು ಮತ್ತು ಸದರಿಯವರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವ ಕುರಿತು ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಸಣ ಕಾರ್ಮಿಕರ ವಿವರವನ್ನು ಕೇಳಿದ್ದಾರೆ.
ಆದರೆ ತಮ್ಮ ಕಛೇರಿಯಲ್ಲಿರುವ ಅಧಿಕಾರಿಗಳು. ತಮ್ಮ ವ್ಯಾಪ್ತಿಯಲ್ಲಿ ಮಸಣ ಕಾರ್ಮಿಕರು ಇಲ್ಲ ಎಂದು ವರದಿ ಮಾಡಿರುತ್ತಾರೆ. ಇದು ಸರಿ ಅಲ್ಲ ನಾವುಗಳು ಹಲವಾರು ಜನರು ವಂಶ ಪರಂಪರೆಯಿಂದ ಕೆಲಸ ಮಾಡುತ್ತ ಬಂದಿದ್ದೇವೆ. ಈಗಾಗಲೇ ನಮಗೆ ಅನ್ಯಾಯವಾಗಿದೆ ನಮ್ಮನ್ನು ಸರ್ವೆ ಮಾಡಿ ಮಹಾನಗರ ಪಾಲಿಕೆಯ ಮೂಲಕ ಮಸಣಕ್ಕೊಬ್ಬರಂತೆ ನೇಮಕ ಮಾಡಿ ಕೊಂಡು ಸರ್ಕಾರಕ್ಕೆ ವರದಿ ನೀಡಬೇಕು.
ಕುಣಿ ತೆಗೆಯುವ ಮತ್ತು ಮುಚ್ಚುವ ಕೆಲಸಕ್ಕೆ ಕನಿಷ್ಟ 3,000 ರೂಗಳನ್ನು ಸರಕಾರವೇ ನೀಡಬೇಕು ಮತ್ತು ಅಗತ್ಯ, ಸುರಕ್ಷತೆಯ ಸಾಮಾನುಗಳನ್ನು ನೀಡಬೇಕು. ರುದ್ರ ಭೂಮಿಯಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಬೋರ್ವೆಲ್ ಹಾಕಬೇಕು ಮತ್ತು ಕೈ ಕಾಲು ತೊಳೆಯುವುದಕ್ಕೆ ನೀರಿನ ತೊಟ್ಟಿಯನ್ನು ನಿರ್ಮಿಸ ಬೇಕು ಸೋಪುಗಳನ್ನು ನೀಡಬೇಕು. ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು ಎಂದು
ಮನವಿ ಮಾಡಿದರು.
ಮುಖಂಡರಾದ ಯು.ಬಸವರಾಜ್, ಜೆ.ಸತ್ಯಬಾಬು, ಸ್ವಾಮಿ, ಸಂಘದ ಅಧ್ಯಕ್ಷ ಹೆಚ್. ನಾಗರಾಜ, ಕಾರ್ಯದರ್ಶಿ ರಾಮಾಂಜಿನಿ ಮೊದಲಾದವರು ಇದ್ದರು.
One attachment • Scanned by Gmail