ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ


ಬಳ್ಳಾರಿ,ಮಾ.30- ಕರ್ನಾಟಕ ವಿಧಾನಸಭೆ ಸಾರ್ವತ್ರಿಕ-2023ರ ಚುನಾವಣೆಯ ಮಾದರಿ ನೀತಿ ಸಂಹಿತೆಯು ಜಾರಿಯಾಗಿದ್ದು, ಚುನಾವಣೆ ಅಧಿಸೂಚನೆ ಏ.13 ರಿಂದ ಜಾರಿಗೆ ಬರಲಿದೆ. ಏ.20 ನಾಮಪತ್ರ ಸಲ್ಲಿಕೆಯಾದ ನಂತರ ಪಕ್ಷದ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಜವಾಬ್ದಾಯುತವಾಗಿ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು  ಜಿಲ್ಲಾ ಚುನಾವಣಾಧಿಕಾರಿ  ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಹೇಳಿದರು.
ಅವರು ಬುಧವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಅನುಮತಿ ಪಡೆಯಲು ಸುವಿಧಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚ ಮಾಡಲು ರೂ.40 ಲಕ್ಷದವರೆಗೆ ಗರಿಷ್ಠ ಮಿತಿಯನ್ನು ನೀಡಲಾಗಿದೆ.  ನಾಮ ಪತ್ರ ಸಲ್ಲಿಸಿದ ಅಭ್ಯರ್ಥಿಯು ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ. ಆತನ ವ್ಯವಹಾರಗಳೆಲ್ಲವೂ ಆ ಖಾತೆಯಲ್ಲಿಯೇ ನಡೆಯಬೇಕಾಗುತ್ತದೆ. ಪಕ್ಷದ ಅಭ್ಯರ್ಥಿಗಳ ಪ್ರತಿಯೊಂದು ಪ್ರಚಾರ ಕಾರ್ಯ ಚಿತ್ರೀಕರಣ ಮಾಡಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಯಾವುದೇ ರೀತಿಯ ಪ್ಲಾಸ್ಟಿಕ್ ಬ್ಯಾನರ್‍ಗಳಾಗಲೀ, ಫ್ಲೆಕ್ಸ್‍ಗಳಾಗಲೀ ಹಾಕುವಂತಿಲ್ಲ ಮತ್ತು ಇತರೆ ಉದ್ದೇಶಿತ ಮುದ್ರಿಸಿದ ಬ್ಯಾನರ್ ಮಾಹಿತಿಯನ್ನು 3 ದಿನಗಳೊಳಗಾಗಿ ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ನೀಡಬೇಕು ಎಂದರು.
80 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ವಿಶೇಷ ಚೇತನರು ಮತದಾನ ಮಾಡಲು ಮತಗಟ್ಟೆಗೆ ಬರಲು ಆಗುವುದಿಲ್ಲ ಎಂದು ಹೇಳಿದರೆ, ಅವರಿಗೆ ಮನೆಯಿಂದಲೇ ಮತದಾನ ಮಾಡಲು ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಥವಾ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಪಕ್ಷದ ಅಭ್ಯರ್ಥಿಗಳು ವಯಸ್ಕ ಮತದಾರರನ್ನು ಕರೆದೊಯ್ಯಲು ತಮ್ಮ ವಾಹನಗಳನ್ನು ಬಳಸುವಂತಿಲ್ಲ ಮತ್ತು ಆ ವ್ಯವಸ್ಥೆಯನ್ನು ದುರ್ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದರು.
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಣ ಹಂಚುವುದು, ಸೀರೆಗಳು ಹಂಚುವುದು, ಕುಕ್ಕರ್‍ಗಳು ಮತ್ತು ಇತರೆ ಯಾವುದೇ ಉಡುಗೊರೆಗಳನ್ನು  ನೀಡುವುದು ಕಂಡುಬಂದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚುನಾವಣೆಯು ಶಾಂತಿಯುತವಾಗಿ ನಡೆಸಲು ಪಕ್ಷದ ಮುಖಂಡರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಸೇರಿದಂತೆ ಬಿಜೆಪಿ, ಕಾಂಗ್ರೇಸ್, ಜೆಡಿಎಸ್, ಎಎಪಿ, ಕಮೂನಿಷ್ಟ ಪಾರ್ಟಿ ಇಂಡಿಯಾ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು