ವಿವಿಧ ಬೇಡಿಕೆ ಶಾಸಕರಿಂದ ಭರವಸೆ

ರಾಮನಗರ,ಸೆ.೨೨:ಕುಂಬಾಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಈಗಾಗಲೇ ಗ್ರಾಮದಲ್ಲಿ ಸುಮಾರು೧.೫೦ ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ. ಗ್ರಾಮಸ್ಥರು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ತಾಲ್ಲೂಕಿನ ಕುಂಬಾಪುರ ಕಾಲೊನಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ’ಗ್ರಾಮವು ನನಗೆ ಹೆಚ್ಚು ಪ್ರೀತಿ- ವಿಶ್ವಾಸ ಹಾಗೂ ಗೌರವ ಕೊಟ್ಟಿದೆ. ಚುನಾವಣೆಯಲ್ಲಿ ನನ್ನ ಕೈ ಬಲಪಡಿಸಿದ. ನಾನು ಶಾಸಕನಾದ ಬಳಿಕ ಗ್ರಾಮಸ್ಥರ ಬೇಡಿಕೆಗಳ ಪೈಕಿ, ಪ್ರಮುಖವಾದ ಇ- ಖಾತಾ ಪ್ರಮಾಣಪತ್ರ ವಿತರಣೆಗೆ ಕ್ರಮ ಕೈಗೊಂಡಿದ್ದೇನೆ’ ಎಂದರು.
ಇದಕ್ಕೂ ಮುಂಚೆ ಕ್ಷೇತ್ರದಲ್ಲಿ ೨೫ ವರ್ಷ ಅಧಿಕಾರದಲ್ಲಿದ್ದವರು ಹಾಗೂ ಎರಡು ಸಲ ಮುಖ್ಯಮಂತ್ರಿಯಾಗಿದ್ದವರು ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ಪರಿಹಾರ ಸಿಗುತ್ತಿದೆ’ ಎಂದರು.
’ಚಿಕ್ಕಮಣ್ಣಗುಡ್ಡೆ ಮತ್ತು ದೊಡ್ಡ- ಮಣ್ಣಗುಡ್ಡೆಯ ೨,೮೦೦ ಎಕರ ಜಮೀನು ವ್ಯಾಜ್ಯವು ಸುಪ್ರೀಂ ಕೋರ್ಟ್ ವರೆಗೆ ಹೋಗಿದೆ. ಈಗಾಗಲೇ ಜಮೀನಿನ ಸರ್ವೇ ಮಾಡಿಸಲಾಗಿದ್ದು, ಕಾನೂನಾತ್ಮಕ ಹೋರಾಟ ನಡೆಯುತಿದೆ. ಈ ವಿಷಯದಲ್ಲಿ ಇನ್ನೆರಡು ತಿಂಗಳಲ್ಲಿ ನಿಮಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಶಾಸಕರು, ನಂತರ ನಿವಾಸಿಗಳಿಗೆ ಇ-ಖಾತೆ ಪ್ರಮಾಣ ಪತ್ರಗಳನ್ನು ವಿತರಿಸಿದರ. ವಿಎಸ್‌ಎಸ್‌ಎನ್ ನಿರ್ದೇಶಕ ಪಾರ್ಥ, ಕಿರಣ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಮಂಗಳ ಗೌರಮ್ಮ, ವಿಭೂತಿಕೆರೆ ಗ್ರಾಮ ಪಂಚಾಯಿತಿ ಪಿಡಿಒ ಗೋಮತಿ, ಸದಸ್ಯ ಸಿದ್ದರಾಜು, ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್, ನಗರಸಭೆ ಅಧ್ಯಕ್ಷ ವಿಜಯಕುಮಾರಿ, ಉಪಾಧ್ಯಕ್ಷ ಎಸ್. ಸೋಮಶೇಖರ್ ಮಣಿ, ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಮುಖಂಡರಾದ ಚೇತನ್, ಕುಮಾರ್, ವೀರಭದ್ರಸ್ವಾಮಿ, ತಿಪ್ಪೆಗೌಡ, ಜಯಲಕ್ಷ್ಮಮ್ಮ, ಪುಟ್ಟಸ್ವಾಮಿ, ನಾಗಮ್ಮ, ಕುಂಭಾಪುರ ಬಾಬು ಹಾಗೂ ಇತರರು ಇದ್ದರು.