ವಿವಿಧ ಬೇಡಿಕೆ ಈಡೇರಿಸುವಂತೆ ಅತಿಥಿ ಶಿಕ್ಷಕರ ಮನವಿ

ಸಿರವಾರ,ಆ.೨೪-
ಅತಿಥಿ ಶಿಕ್ಷಕರ ಸೇವಾ ಹಿರಿತನ ಪರಿಗಣಿಸಿ ನೇಮಕಾತಿ ಮಾಡುವದು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಲೆಗೆ ಗೈರಾಗಿ, ಶಿರಸ್ತೆದಾರ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಇವರಿಗೆ ಮನವಿ ಸಲ್ಲಿಸಿದರು.
ಕಳೆದ ೧೨ ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ, ಕೃಂಪಾಕ ಸೇರಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಸಂಘದ ಸದಸ್ಯರು ಪ್ರಾಮಾಣಿಕವಾಗಿ, ಮಕ್ಕಳಿಗೆ ಶೈಕ್ಷಣಿಕವಾಗಿ ಬದುಕು ಕಟ್ಟಿಕೊಡುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ವಿಚಾರ ವಾಗಿ ಕಳೆದ ತಿಂಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಮಾಡಿದ್ದೆವು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.
ಆದರೆ, ಸಮಸ್ಯೆಗಳನ್ನು ಬಗೆಹರಿಸುವ ಯಾವುದೇ ಆದೇಶಗಳು ಸರ್ಕಾರದಿಂದ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಹಾಗೂ ಸಾಂಕೇತಿಕವಾಗಿ ರಾಜ್ಯಾದ್ಯಂತ ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ಎಲ್ಲಾ ಅತಿಥಿ ಶಿಕ್ಷಕರು ಶಾಲೆ ತೊರೆಯುವ ಅಭಿಯಾನ’ ಕೈಗೊಂಡಿದ್ದೇವೆ ಎಂದು ಅತಿಥಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮೌನೇಶ ಮ್ಯಾಗಳಮನಿ ತಿಳಿಸಿದರು.
ಅತಿಥಿ ಶಿಕ್ಷಕರ ಬಹುದಿನಗಳ ಬೇಡಿಕೆಗಳಾದ ಅತಿಥಿ ಶಿಕ್ಷಕರಿಗೆ ಸೇವಾ ಹಿರಿತನ ಪರಿಗಣಿಸಿ ನೇಮಕಾತಿ ಮಾಡುವುದು, ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಾಯಂ ಹುದ್ದೆಗಳು ಭರ್ತಿಯಾದಲ್ಲಿ ನಮ್ಮನ್ನು ಬಿಡುಗಡೆಗೊಳಿಸದಿರುವುದು, ಪ್ರತಿ ತಿಂಗಳು ಸರಿಯಾಗಿ ವೇತನ ನೀಡುವುದು, ಶೇ.೫ ಕೃಪಾಂಕ ನೀಡುವುದು, ಕಾಯಂ ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರನ್ನು ವಿಲೀನಗೊಳಿಸು ವುದು, ಇಲಾಖೆಯ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು. ಇಎಲ್. ಸಿಎಲ್, ಮಹಿಳೆಯರಿಗೆ ಹೆರಿಗೆ ರಜೆ ನೀಡಬೇಕು. ದೆಹಲಿ, ಪಂಜಾಬ್, ಹರಿಯಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಅತಿಥಿ ಶಿಕ್ಷಕರ ಸೇವೆ ಕಾಯಂಗೊಳಿಸಲು ಸೂಕ್ತ ಕಾನೂನು ರೂಪಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ಈ ವೇಳೆ ಅತಿಥಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮೌನೇಶ ಮ್ಯಾಗಳಮನಿ, ಮಹಿಳಾ ಉಪಾಧ್ಯಕ್ಷೆ ಶಾಂತ ವಡವಟ್ಟಿ, ಬಸವರಾಜ ಪಾತಪೂರು, ರಾಜು ಸಿರವಾರ, ಮಲ್ಲಯ್ಯ ಕವಿತಾಳ, ಅನಿತಮ್ಮ ಹುಡಾ, ರತ್ನಮ್ಮ ಕುರುಕುಂದಾ, ಮಂಜುನಾಥ, ಮರಿಸ್ವಾಮಿ, ನಿಂಗರಾಜ, ಹುಸೇನಪ್ಪ, ಮೌನೇಶ ಬೋವಿ, ಯಲ್ಲಪ್ಪ, ಹಸ್ಮಾ ಸೇರಿದಂತೆ ಇತರರಿದ್ದರು.