“ವಿವಿಧ ಬೇಡಿಕೆ ಈಡೇರಿಸಲು ಅಂಗನವಾಡಿ, ಬಿಸಿಯೂಟ ಕೆಲಸಗಾರರ ಆಗ್ರಹ”

ಸಂಜೆವಾಣಿ ವಾರ್ತೆ
ಸಿರಿಗೇರಿ. ಸೆ.25- ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಸ್ಥಳೀಯ ಮತ್ತು ಸಿರಿಗೇರಿ ವ್ಯಾಪ್ತಿಯ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು ಹಾಗೂ ಅಡಿಗೆ ಸಹಾಯಕರು ಸೇರಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಪಡಿಸಿ, ರಾಜ್ಯದ ಮುಖ್ಯಮಂತ್ರಿಗಳಿಗೆ, ಕೇಂದ್ರದ ಪ್ರಧಾನ ಮಂತ್ರಿಗಳಿಗೆ ರವಾನೆಯಾಗುವಂತೆ ಸಿಐಟಿಯು ಒಕ್ಕೂಟದ ವತಿಯಿಂದ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರದಲ್ಲಿ ಸ್ಕೀಮ್ ಕೆಲಸಗಾರರಾದ ನಾವುಗಳು ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಕೋರೋನ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳೊಂದಿಗೆ ಹಗಲಿರುಳು ದುಡಿದಿದ್ದೇವೆ. ಕೋವಿಡ್‍ನಿಂದ ಕೆಲವರು ಮೃತಪಟ್ಟಿದ್ದಾರೆ. ಸರ್ಕಾರ ಸತ್ತವರಿಗೆ ಘೋಷಿಸಿದ ಪರಿಹಾರ ಹುಸಿಯಾಗಿದೆ. ಕೂಡಲೇ ಪರಿಹಾರಗಳನ್ನು ಒದಗಿಸಬೇಕು, ಕೋವಿಡ್-19 ಭತ್ಯ ನೀಡಬೇಕು, ಬಾಕಿ ಇರುವ ವೇತನ ಕೂಡಲೇ ನೀಡಿ ತುಟ್ಟಿಭತ್ತೆ, ಪ್ರವಾಸಬತ್ಯೆ ನೀಡಬೇಕು, ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿ ಒದಗಿಸಬೇಕು, ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು, 21ಸಾವಿರ ರೂ.ಗಳ ಕನಿಷ್ಟ ವೇತನ ಜಾರಿಗೊಳಿಸಬೇಕು, ಬಿಸಿಯೂಟ ತಯಾರಿಕರಿಗೆ ಬೇಸಿಗೆ ರಜೆಯೊಂದಿಗೆ ಕನಿಷ್ಟ ವೇತನ ನೀಡಬೇಕೆಂದು ಹತ್ತಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮನವಿಪತ್ರ ನೀಡಿದರು.
   ಪ್ರಾರಂಭದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಮಾಯಿಸಿದ ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು, ಅಡಿಗೆ ಸಹಾಯಕರು ಸರ್ಕಾರ ತಮ್ಮ ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗಿದರು. ಅಂ.ಕಾ.ತಾಲೂಕು ಖಜಾಂಚಿ ಜೆ.ರೇಣುಕಾ ಮಾತನಾಡಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಸಿರಿಗೇರಿಯ ಎ ಮತ್ತು ಬಿ ವೃತ್ತ ಪದಾಧಿಕಾರಿಗಳಾದ ಸಂಗಮ್ಮ ಎಚ್.ಪದ್ಮ ಮಾತನಾಡಿ ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡಿದರು. ಕೆಲ ಅಂಗನವಾಡಿ ಕಾರ್ಯಕರ್ತರು ಮಾತನಾಡಿ ಗ್ರಾಮಾಡಳಿತದಿಂದ ನಮ್ಮನ್ನು ಬಯಲುಶೌಚ ಮುಕ್ತ ಅಭಿಯಾನ, ಇತರೆ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ, ಇದರಿಂದ ನಮಗೆ ಕೆಲಸದ ಹೆಚ್ಚಿನ ಹೊರೆಯಾಗುತ್ತಿದೆ, ಗ್ರಾಮಾಡಳಿತದ ಕೆಲಸಗಳಿಂದ ನಮ್ಮನ್ನು ಕೈಬಿಡಬೇಕೆಂದು ತಿಳಿಸಿದರು. ಎಚ್.ಲಕ್ಷ್ಮಿ ಮನವಿಪತ್ರ ಓದಿದರು, ಬಿಸಿಯೂಟ ಕ್ಲಸ್ಟರ್ ಕಾರ್ಯದರ್ಶಿ ಎಸ್.ಗೀತಮ್ಮ, ಖಜಾಂಚಿ ಜಿ.ಲಕ್ಷ್ಮಿ ಇತರರು ಪಾಲ್ಗೊಂಡಿದ್ದರು. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ವೀರೇಶಗೌಡ ಮನವಿಪತ್ರವನ್ನು ಸ್ವೀಕರಿಸಿದರು.