ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

ಮೈಸೂರು:ಜ.27: ಅರಣ್ಯ ಇಲಾಖೆ ಮೈಸೂರು ವೃತ್ತ ವಿಭಾಗ ಕಛೇರಿ ಮೈಸೂರು ಇಲ್ಲಿನ ವಿವಿಧ ವಲಯಗಳಲ್ಲಿ ದಿನಗೂಲಿ ನೌಕರರಾಗಿ ಕಳೆದ 10-20ವರ್ಷಗಳಿಂದ ನೆಡುತೋಪು ರಕ್ಷಣಾ ಶಿಬಿರ ಸಸ್ಯ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ನ್ಯಾಯ ಸಮ್ಮತವಾಗಿ ಸಿಗಬೇಕಾದ ಇಲಾಖಾ ದರಪಟ್ಟಿಯಂತೆ ಮಜೂರಿ ಪಾವತಿ ಮಾಡದೆ ಕಡಿಮೆ ಮಜೂರಿ ಪಾವತಿಸಿ ವಂಚನೆ ಮಾಡುತ್ತಿರುವ ಇಲಾಖಾ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ದಿನಗೂಲಿ ನೌಕರರು ಅಶೋಕಪುರಂ ನಲ್ಲಿರುವ ವಿಭಾಗ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ ಕಾರ್ಮಿಕ ಆಯುಕ್ತರು ಪ್ರತಿ ವರ್ಷ ಹೆಚ್ಚಳವಾಗುವ ಗ್ರಾಹಕ ಬೆಲೆ ಸೂಚ್ಯಂಕದಂತೆ ಕನಿಷ್ಠವೇತನ ಕಾಯ್ದೆಯಡಿ ದರ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದ್ದಾರೆ. ಈ ಆದೇಶವನ್ನು ರಾಜ್ಯದ ಎಲ್ಲಾ ಇಲಾಖೆಗಳು ಅಳವಡಿಸಿಕೊಂಡು ವೇತನ ಹಾಗೂ ಸಾಮಾಜಿಕ ಭದ್ರತೆಯಡಿ ಸಿಗುವ ಸೌಲಭ್ಯಗಳಾದ ಕಾರ್ಮಿಕ ಭವಿಷ್ಯನಿಧಿ, ಆರೋಗ್ಯ ವಿಮೆ ಕೆಲಸ ನಿರ್ವಹಿಸುತ್ತಿರುವ ಯಾವುದೇ ದಿನಗೂಲಿ, ಪಿಸಿಪಿ ನೌಕರರ ಹೆಸರಿನಲ್ಲಿ ದಾಖಲೆಗಳನ್ನು ನಿರ್ವಹಿಸದೇ ಗುತ್ತಿಗೆ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ಇಲಾಖೆಯ ಅಧೀನ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅರಣ್ಯ ಇಲಾಖೆ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಎಸ್.ನಂಜುಂಡಸ್ವಾಮಿ, ಡಾ.ಆರ್.ರಾಜು, ಗೌರವಾಧ್ಯಕ್ಷ ನವೀನ್ ಕುಮಾರ್, ಕೃಷ್ಣೇಗೌಡ ಇತರರಿದ್ದರು.