ವಿವಿಧ ಬೇಡಿಕೆ ಈಡೇರಿಕೆಗೆ ಕೋಮುಲ್ ಅಧ್ಯಕ್ಷರಿಗೆ ಮನವಿ ಸಲ್ಲಿಕೆ

ಕೋಲಾರ,ಮಾ,೧೩-ಹಾಲು ಉತ್ಪಾದಕರ ಮತ್ತು ಸಂಘಗಳ ಸಿಬ್ಬಂದಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಡೇರಿಗಳ ಹಾವಳಿ ಹೆಚ್ಚಾಗಿದ್ದು, ಉತ್ಪಾದಕರಿಗೆ ಯಾವುದೇ ನಿಬಂಧ ಹೇರದೆ ಪ್ರತಿ ಲೀಟರಿಗೆ ೪೦ ರೂಗಳನ್ನು ನೀಡುತ್ತಿರುವುದರಿಂದ ನಮ್ಮ ಸಂಘಗಳಲ್ಲಿ ಬರುವ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುತೇಕ ಎಲ್ಲಾ ಭಾಗಗಳಲ್ಲಿ ಬಿ.ಎಂ.ಸಿ ಕೇಂದ್ರಗಳನ್ನು ಅಳವಡಿಸಿರುವುದರಿಂದಾಗಿ ಸಂಘಗಳಿಗೆ ಆರ್ಥಿಕ ನಷ್ಟವಾಗುತ್ತಿದೆ. ಹಾಲು ಉತ್ಪಾದಕರಿಗೆ ಜಿಡ್ಡಿನಾಂಶದ ಆಧಾರದ ಮೇಲೆ ಧರ ನೀಡಲಾಗುತ್ತಿದ್ದು, ಕನಿಷ್ಠ ೪.೦ ರಿಂದ ೪.೨ ರ ಜಿಡ್ಡಿನಾಂಶದವರೆಗೆ ಧರ ನೀಡಲಾಗುತ್ತಿದೆ.
ಬಿ.ಎಂ.ಸಿ ಕೇಂದ್ರಗಳಲ್ಲಿ ತಿಂಗಳಲ್ಲಿ ಸುಮಾರು ೪೦ ಸರತಿಗಳಲ್ಲಿ ೧.೧ ಜಿಡ್ಡಿನಾಂಶ ಮತ್ತು ೮.೫ ಎಸ್.ಎನ್.ಎಫ್ ನೀಡಿ ಉಳಿದ ೨೦ ಸರತಿಗಳಲ್ಲಿ ೩.೮ ಜಿಡ್ಡು ಮತ್ತು ೮.೩ ಎಸ್.ಎನ್.ಎಫ್. ಮತ್ತು ೩.೬ ಜಿಡ್ಡಿನಾಂಶ ೮.೫ ಎಸ್.ಎನ್.ಎಫ್. ನೀಡುತ್ತಿರುವುದರಿಂದ ಸಂಘಗಳಲ್ಲಿ ತುಂಬಾ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಹಲವಾರು ಬಾರಿ ಮನವಿ ನೀಡಿದ್ದರೂ ಬಹುತೇಕ ಬೇಡಿಕೆಗಳ ಈಡೇರಿಕೆಗೆ ಮುಂದಾಗದಿರುವುದು ಖಂಡನೀಯ, ಹೀಗೆಯೇ ನಿರ್ಲಕ್ಷ್ಯ ಮಾಡಿಕೊಂಡು ಹೋಗುತ್ತಿದ್ದರೆ ಕೋಚಿಮುಲ್‌ಗೆ ಮುತ್ತಿಗೆ ಹಾಕಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಚಿನ್ನಹಳ್ಳಿ ಗೋಪಾಲ್, ಮಿಂಡಹಳ್ಳಿ ಮುನಿರಾಜು, ಬಗಲಹಳ್ಳಿ ನಾಗೇಶಗೌಡ, ವಕ್ಕಲೇರಿ ನಾಗರಾಜ್, ಎಸ್.ಎಂ.ಗೋಪಾಲ್, ಮದನಹಳ್ಳಿ ರಮೇಶ್, ತೊಂಡಾಲ ಮಂಜುನಾಥ್, ತಿಮ್ಮೇಗೌಡ, ಗಂಗಾಪುರ ಬಾಬು, ಶ್ರೀರಂಗಪುರ ರವಿ ಇದ್ದರು.