
ರಾಯಚೂರು,ಜು.೨೫- ಫಾರಂ ನ ೫೦,೫೩,೫೭ ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಸಕ್ರಮಗೊಳಿಸಿ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರಕಾರಿ ಜಮೀನುಗಳಲ್ಲಿ ಸಾಗುವಳಿಯಲ್ಲಿ ತೊಡಗಿದ ಬಡ ರೈತರಿಗೆ ಹಕ್ಕು ಪತ್ರ ನೀಡದೇ ಗುತ್ತಿಗೆಗೆ ನೀಡುವ ಕ್ರಮವನ್ನು ವಾಪಾಸು ಪಡೆಯಬೇಕು.ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ೨೦೦೬ ಕ್ಕೆ ತಿದ್ದುಪಡಿ ತಂದು ೨೦೦೫ ರ ಪೂರ್ವದಲ್ಲಿ ಸಾಗುವಳಿಯಲ್ಲಿ ತೊಡಗಿದ್ದ ಎಲ್ಲ ಬಡವರಿಗೆ ಹಕ್ಕುಪತ್ರ ನೀಡಬೇಕು. ಅದೇ ರೀತಿ ಅಂತಹ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಗೆ ಆದೇಶಿಸಬೇಕು. ಚನ್ನೈ ಬೆಂಗಳೂರ ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ಹೆಸರಿನಲ್ಲಿ ಮತ್ತಿತರೆ ಅಭಿವೃದ್ಧಿಯ ಹೆಸರಿನಲ್ಲಿ ಬಲವಂತವಾಗಿ ರೈತರಿಂದ ಕೃಷಿ ಭೂಮಿ ಸ್ವಾಧೀನ ಮಾಡುವುದನ್ನು ನಿಲ್ಲಿಸಬೇಕು. ಈಗಾಗಲೇ ಭೂ ಸ್ವಾಧೀನ ಮಾಡಿ ಐದು ವರ್ಷ ಗತಿಸಿದ್ದರೂ ಕೈಗಾರಿಕೆ ನಿರ್ಮಾಣವಾಗದ ಜಮೀನುಗಳನ್ನು ಮೂಲ ರೈತರಿಗೆ ವಾಪಾಸು ನೀಡಬೇಕು ಹಾಗೂ ೨೦೧೩ ರ ಕೇಂದ್ರ ಭೂ ಸ್ವಾಧೀನ ಕಾಯ್ದೆಗೆ ವ್ಯತಿರಿಕ್ತವಾಗಿ ಹಿಂದಿನ ರಾಜ್ಯ ಸರ್ಕಾರಗಳು ಅಂಗೀಕರಿಸಿರುವ ರೈತ ವಿರೋಧಿ ರಾಜ್ಯ ಭೂ ಸ್ವಾಧೀನ ತಿದ್ದುಪಡಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಾದ್ಯಂತ ಇರುವ ನಿವೇಶನ ರಹಿತರನ್ನು ಗಣತಿ ಮಾಡಿ ಉಚಿತ ಹಿತ್ತಲು, ನಿವೇಶನ ಸಹಿತ ಮನೆಯನ್ನು ನಿರ್ಮಿಸಿಕೊಡಲು ಕ್ರಮವಹಿಸಬೇಕು. ಇದಕ್ಕಾಗಿ ವಿಶೇಷ ಬಜೆಟ್ ಮೊತ್ತವನ್ನು ಒದಗಿಸಬೇಕು. ಪರಿಶಿಷ್ಟ ಜಾತಿ ,ಪರಿಶಿಷ್ಠ ಪಂಗಡದ ಭೂ ರಹಿತರಿಗೆ ,ದೇವದಾಸಿ ಮಹಿಳೆಯರಿಗೆ,ತಲಾ ಐದು ಎಕರೆ ನೀರಾವರಿ ಜಮೀನು ಒದಗಿಸಲು ಪ್ರತಿ ತಾಲೂಕಿನಲ್ಲಿಯೂ ಪ್ರತಿವರ್ಷ ಕನಿಷ್ಠ ೧೦೦ ಫಲಾನುಭವಿಗಳಿಗೆ ಜಮೀನು ದೊರೆಯುವಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಜೆಟ್ ಅನುದಾನದಲ್ಲಿ ಅಗತ್ಯ ಮೊತ್ತ ಒದಗಿಸಬೇಕು ಮತ್ತು ಇದಕ್ಕಾಗಿ ಭೂ ಸ್ವಾಧೀನಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಜಿ ವೀರೇಶ್,ರಂಗಪ್ಪ,ರಮೇಶ್,ಹರೀಶ್,ಮೌನೇಶ್,ಹನುಮಂತ,ಯಂಕಪ್ಪ,ಸತ್ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.