ವಿವಿಧ ಬೇಡಿಕೆಗೆ ಆಗ್ರಹಿಸಿ ಮೀರಾಪುರ ಗ್ರಾಮಸ್ಥರ ಪ್ರತಿಭಟನೆ


ರಾಯಚೂರು.ನ.03- ಮೀರಾಪುರ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಮತ್ತು ಮನೆ ಕುಸಿತಕ್ಕೆ ಪರಿಹಾರ ನೀಡುವಂತೆ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಮಾಡಿದರು.
ಅವರಿಂದು ನಗರದ ತಾಹಶಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡಿಸಿ ಮನವಿ ಸಲ್ಲಿಸಿದ ಅವರು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಮೀರಾಪೂರ ಗ್ರಾಮವು ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗಿದ್ದು, ಗ್ರಾಮಸ್ಥರು ಮತ್ತು ರೈತರು ಬೆಳೆ ಕಳೆದುಕೊಂಡು, ಮಳೆಗೆ ಮನೆ ಕುಸಿದು ವಸತಿ ಇಲ್ಲದೇ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಆಡಳಿತವು ಮನೆ ಕಳೆದುಕೊಂಡ ಹಾಗೂ ಬೆಳೆ ಹಾನಿಗೊಳಗಾದವರಿಗೆ ಶೀಘ್ರ ಪರಿಹಾರ ಒದಗಿಸಬೇಕು.
ಬೆಳೆಗೆ ಗೊಬ್ಬರ ಕೀಟನಾಶಕಗಳನ್ನು ಖರೀದಿ ಮಾಡಲು ಸಾಲಮಾಡಿದ್ದು, ಈಗ ಬೆಳೆಯೂ ಇಲ್ಲದೇ ಸಾಲವೂ ಆಗಿ ಕೈಗೆ ಮದ ತುತ್ತು ಬಾಯಿಗೆ ಬಾರದಂತಾಗಿದೆ. ಅದೂ ಅಲ್ಲದೇ ಮನೆಗಳು ಕುಸಿದ ಪರಿಣಾಮ ಸೂರು ಇಲ್ಲದೇ ಗ್ರಾಮಸ್ಥರು ಬೀದಿಯಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ, ಉಳಿದ ಮನೆಗಳು ಯಾವಾಗ ಕುಸಿಯುತ್ತವೆಯೋ ಎಂದು ಭಯದಿಂದ ಜೀವನ ನಡೆಸುವ ಜೀವ ಕೈಯಲ್ಲಿಡಿದು ಬದುಕುವಂತಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಸರ್ಕಾರ ಸಮೀಕ್ಷೆಗೆ ಮುಂದಾಗಿರುವಿದು ಬೇಸರದ ಸಂಗತಿಯಾಗಿದೆ
ಆದ್ದರಿಂದ ಸರ್ಕಾರ ಈ ಕೂಡಲೇ ಪ್ರವಾಹಕ್ಕೆ ತುತ್ತಾದ ಮೀರಾಪೂರ ಗ್ರಾಮಕ್ಕೆ ಪರಿಹಾರ ವಿತರಿಸಿ, ಮನೆ ಹಾಗೂ ಬೆಳೆ ಹಾನಿಗೆ ಸರ್ಕಾರ ನಷ್ಟ ಪರಿಹಾರ ಒದಗಿಸಬೇಕು, ಸಂಪೂರ್ಣ ಕುಸಿದ ಮನೆಗಳಿಗೆ ವಸಿ ಯೋಜನೆಯಡಿ ಮನೆ ನಿರ್ಮಿಸಿ‌ಕೊಡಬೇಕು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮೋದ ಕುಮಾರ್.ಚನ್ನಬಸವ ಜನೇಕಲ್, ಗ್ರಾಮದ ರೈತರಾದ ಮಹಾದೇವ ರತ್ನಮ್ಮ, ಚೆನ್ನಮ್ಮ, ಅಶೋಕ, ನಾಗಮ್ಮ ಸುಜಾತ ಸೇರಿದಂತೆ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.