ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

ಮೈಸೂರು,ನ.9:- ಪ್ರಮುಖ 12 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತ್ ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ವಿವಿಧ ಗ್ರಾ.ಪಂ ಪೌರಕಾರ್ಮಿಕರು ದಲಿತ ಸಂಘರ್ಷ ಸಮಿತಿ ಮತ್ತು ಪೌರಕಾರ್ಮಿಕ ಅಸಂಘಟಿತ ಕಾರ್ಮಿಕ ವಿಭಾಗದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ 7ತಾಲೂಕುಗಳ 236 ಗ್ರಾಮಪಂಚಾಯತ್ ಗಳಲ್ಲಿನ ಜನರ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತಿರುವ ಸ್ವಚ್ಛತಾಗಾರರು ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟು ತಮ್ಮ ಜೀವನೋಪಾಯಕ್ಕಾಗಿ ಅನ್ಯಮಾರ್ಗವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದುಕೊಂಡು ಸ್ವಚ್ಛತಾ ವೃತ್ತಿಗಳಲ್ಲಿ ತೊಡಗಿಸಿಕೊಂಡು ಈ ಜೀವನಕ್ಕೆ ಸಮರ್ಪಿಸಿಕೊಮಡಿರುವಂತಹ ನೌಕರರಿಗೆ ಯಾವುದೇ ರೀತಿಯ ಕೆಲಸದ ಭದ್ರತೆ ಇಲ್ಲ. ಇವರು ಮಾಡುವ ಕೆಲಸದ ಅನುಮೋದನೆ ನೇಮಕಾತಿ ಪ್ರಕ್ರಿಯೆ ಅತ್ಯಾವಶ್ಯಕವಾಗಿದೆ. ಈ ಕುರಿತು ಹಲವು ಗೊಂದಲಗಳು ಸೃಷ್ಟಿಯಾಗಿದೆ. ಗ್ರಾಪಂ ನಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನೂ ಸರ್ಕಾರಿ ನೌಕರರೆಂದು ರಾಜ್ಯ ಸರ್ಕಾರವು ಪರಿಗಣಿಸಬೇಕು.
ಗ್ರಾಪಂ ಗಳಲ್ಲಿ ಹಾಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ವಾಸಿಸಲು ಆಯಾ ಪಂಚಾಯತ್ ನಿಂದ ನಿವೇಶನ ಮಂಜೂರು ಮಾಡಲು ಸಂಬಂಧಪಟ್ಟವರಿಗೆ ಆದೇಶ ನೀಡಲು ಒತ್ತಾಯ. ಗ್ರಾಪಂ ಎಲ್ಲಾ ಪೌರಕಾರ್ಮಿಕರಿಗೆ ಸರ್ಕಾರದ ಕಾರ್ಮಿಕರ ಇಲಾಖೆಯ 2020ನೇ ವಾರ್ಷಿಕ ಸಾಲಿನ ಆದೇಶದಂತೆ ಕನಿಷ್ಠ ವೇತನ, ಈಎಸ್ ಐ, ಪಿಎಫ್, ಸೌಲಭ್ಯಗಳನ್ನು ಕಲ್ಪಿಸುವುದು. ಗ್ರಾಪಂ ವ್ಯಾಪ್ತಿಯ ಹಾಲಿ ವಾಸ ಮಾಡುತ್ತಿರುವ ಪೌರಕಾರ್ಮಿಕರ ನಿವೇಶನಗಳಿಗೆ ಹಕ್ಕುಪತ್ರ, ಸ್ವಾಧೀನ ಪತ್ರಗಳನ್ನು ಮಂಜೂರು ಮಾಡಿಸಲು ಕ್ರಮ, ನಿವೃತ್ತ ಉಪಧನ, ಮರಣ ಉಪಧನ ಹಣವನ್ನು ವಿಳಂಬ ಮಾಡದೆ ಜರೂರಿಗೆ ಕೊಡಿಸುವುದು. ತುಟ್ಟಿಭತ್ಯೆ, ಬಾಕಿ ವೇತನ, ಜೀವವಿಮೆ ಭೀಮ ಯೋಜನೆಯ ಆರೋಗ್ಯ ಕಾರ್ಡ್ ಗಳನ್ನು ಕೊಡುವುದು, ಸ್ವಚ್ಛತಾ ಕಾರ್ಮಿಕರಿಗೆ ಸೇವಾ ನಿಯಮ ತೆರೆಯುವುದು, ವಿದ್ಯಾರ್ಹತೆಗನುಗುಣವಾಗಿ ಮುಂಬಡ್ತಿ ನೀಡಿ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಬೇಕು.
ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸಿ ಮೃತಪಟ್ಟಂತಹ ಪೌರಕಾರ್ಮಿಕರ ಕುಟುಂಬಗಳಿಗೆ ಕೆಲಸವನ್ನು ಕೊಡಿಸಿಕೊಟ್ಟು ಅವರ ಜೀವನಕ್ಕೆ ಆರ್ಥಿಕ ಭದ್ರತೆ ಕಲ್ಪಿಸಲು ಕ್ರಮವಹಿಸಬೇಕು. ಎಲ್ಲಾ ಗ್ರಾ ಪಂ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಪೌರಕಾರ್ಮಿಕರಿಗೆ ಕೆಲಸದ ಅವಧಿಯನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ನಿಗದಿಸಿ ಆದೇಶ ಹೊರಡಿಸಬೇಕು. ಪೌರಕಾರ್ಮಿಕರ ಸಮಸ್ಯೆಗಳು/ಕುಂದುಕೊರತೆಗಳನ್ನು ಆಲಿಸಿ ಇತ್ಯರ್ಥಪಡಿಸಲು ಮುಖ್ಯಕಾರ್ಯನಿರ್ವಾಹಕರಾದ ತಮ್ಮ ಅಧ್ಯಕ್ಷತೆಯಲ್ಲಿ ಇಒ ಮತ್ತು ಪಿಡಿಒ ಗಳ ಸಮ್ಮುಖದಲ್ಲಿ ಸಭೆಯನ್ನು ಪೌರಕಾರ್ಮಿಕರ ಸಂಘಟನೆಯ ಜೊತೆಗೂಡಿ ಮಾಸಿಕ ಸಭೆ ಏರ್ಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹರಿಹರ ಆನಂದಸ್ವಾಮಿ, ಡಾ.ಆಲಗೂಡು ಚಂದ್ರಶೇಖರ್, ಆರ್ಟಿಸ್ಟ್ ಎಸ್.ನಾಗರಾಜ್, ಡಿ.ಎನ್.ಬಾಬು, ಮೈಸೂರು ಮಹದೇವ, ಮಂಚಯ್ಯ, ಆರ್ ರಾಜು ಕೆಂಪಯ್ಯನಹುಂಡಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು.