ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ, ಡಿ.24: ಪಾಲಿಕೆಯ ವ್ಯಾಪ್ತಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಜನಸೈನ್ಯ ಸಂಘಟನೆ ನಗರದ ನಗರೂರು ನಾರಾಯಣರಾವ್ ಉದ್ಯಾನವನದಿಂದ ಮಹಾನಗರ ಪಾಲಿಕೆ ಕಛೇರಿಯವರೆಗೆ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎರ್ರಿಸ್ವಾಮಿ, ನಗರದ ವಿವಿಧಡೆಗಳಲ್ಲಿ ರಾಜಕಾಲುವೆಗಳ ಸ್ವಚ್ಛತೆ ಇಲ್ಲದಿರುವುದರಿಂದ ಆಯಾ ಭಾಗಗಳ ಜನರು ಹಲವಾರು ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಪಾಲಾಗಿದ್ದು, ಇನ್ನೂ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿರುತ್ತಾರೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ. ನಗರದ ಪ್ರದೇಶದ ನಾನಾ ಭಾಗಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕನ್‍ಗುನ್ಯಾ, ಡೆಂಗ್ಯೂ ಮುಂತಾದ ರೋಗಗಳು ಹರಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎತ್ತದಿರುವುದು ವಿಪರ್ಯಾಸ ಸಂಗತಿ ಎಂದು ಆಗ್ರಹಿಸಿದರು.
ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲದೇ ಇದ್ದಲ್ಲಿ ಪಾಲಿಕೆಯ ವಿರುದ್ಧ ಹಂತ ಹಂತವಾಗಿ ವಿವಿಧ ಚಳುವಳಿಗಳನ್ನು ಆರಂಭಿಸಬೇಕಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಫಯಾಜ್ ಭಾಷಾ, ನಗರ ಉಪಾಧ್ಯಕ್ಷರಾದ ಆರ್ ಗೋವಿಂದರಾಜು ಮೊದಲಾದವರು ಇದ್ದರು.