ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.22: ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಭಾಗದ ರೈತಾಪಿವರ್ಗದವರು ಸರಿಯಾಗಿ ಮಳೆಬಾರದೆ ಇರುವುದರಿಂದ ತುಂಬಾ ಸಂಕಷ್ಟದಲ್ಲಿರುವುದರಿಂದ ಈ ಕೆಳಕಾಣಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಬಲೇಶ್ವರ ತಾಲೂಕಾ ದಂಡಾಧಿಕಾರಿಗಳ ಮೂಲಕ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿಯವರಿಗೆ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಉಮೇಶ ಕೋಳಕೂರ ಮಾತನಾಡಿ, ದ್ರಾಕ್ಷಿ ಬೆಳೆಯುವ ರೈತರ ಮನುಕ(ಒಣದ್ರಾಕ್ಷಿ)ಗೆ 1ಕೆ.ಜಿಗೆ ಕನಿಷ್ಟ ರೂ. 250 ಬೆಂಬಲಬಲೆ ಘೋಷಣೆ ಮಾಡಬೇಕು. ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಿಗೆ ಒಣದ್ರಾಕ್ಷಿಯನ್ನು ಪೌಷ್ಟಿಕ ಆಹಾರವಾಗಿ ಪೂರೈಕೆ ಮಾಡುವುದು. ಕಬ್ಬು ಬೆಳೆಯುವ ರೈತರಿಗೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡುವುದು. ಹಾಗೂ ಕಬ್ಬು ಬೆಳೆ ಹಾನಿ ಪರಿಹಾರ ಹಣ ಮಂಜೂರಿಸುವುದು. ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಎಲ್ಲ ಕಛೇರಿಗಳನ್ನು ಪ್ರಾರಂಭಿಸುವುದು. ವಿಜಯಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡುವುದು. ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆವಿಮಾ ಮಂಜೂರಿಸುವುದು. ಆಧಾರ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ, ಬದಲಾವಣೆಯಲ್ಲಿನ ತಾಂತ್ರಿಕ ಸಮಸ್ಯೆಯನ್ನು ನಿವಾರಿಸುವುದು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಈರಣ್ಣ ಎಸ್. ಶೀರಮಗೊಂಡ ಮಾತನಾಡಿ, ಸದರಿ ಸಮಯದಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಸರ್ಕಾರವು ತೆಂಗು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದಂತೆ, ಉತ್ತರ ಕರ್ನಾಟಕ ಭಾಗದಲ್ಲಿ ದ್ರಾಕ್ಷಿ ಬೆಳೆಯುವ ಮತ್ತು ಒಣದ್ರಾಕ್ಷಿ (ಮನೂಕಿ)ಗೆ ಕನಿಷ್ಠ ಬೆಂಬಲ ಬೆಲೆ ಪ್ರತಿ ಕೆ.ಜೆ.ಗೆ, ರೂ 250 ಮಾಡುವುದಾಗಿ ಸೇರಿದಂತೆ, ಮಹಾರಾಷ್ಟ್ರ ಮಾದರಿಯಲ್ಲಿ ಒಣದ್ರಾಕ್ಷಿಯನ್ನು ಶಾಲೆಗಳಲಿ ಹಾಗೂ ಅಂಗನವಾಡಿ ಕೇಂದ್ರಗಳ ಮುಖಾಂತರ ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ಪೂರೈಕೆ ಮಾಡಿದರೆ ರೈತರಿಗೆ ಇನ್ನಷ್ಟು ಲಾಭವಾಗುವುದೆಂದು ಹೇಳಿದರು.
ಮಾಜಿ ಜಿ.ಪಂ. ಸದಸ್ಯರಾದ ಮಲ್ಲು, ಆ. ಕನ್ನೂರ ಮಾತನಾಡಿ, ಬಬಲೇಶ್ವರ ಹಾಗೂ ತಿಕೋಟಾ ಭಾಗದ ಗ್ರಾಮಗಳ ಕೆರೆಗಳಿಗೆ ಮತ್ತು ಹಳ್ಳ, ಬಾಂಧಾರುಗಳಿಗೆ ಕಾಲುವೆಗಳ ಮುಖಾಂತರ ನೀರು ಬಿಟ್ಟು ಜನರಿಗೆ ಹಾಗೂ ಧನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಬದುಕಲು ಅನುವು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಒಂದು ವೇಳೆ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂಧಿಸಿದಿದ್ದರೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು.
ಮುಖಂಡರಾದ ರವಿಗೌಡ ಶಂ. ಬಿರಾದಾರ, ಬಸವರಾಜ ಕುರುವಿನಶೆಟ್ಟಿ, ಶಂಕರ್‍ಗೌಡ ಬಿರಾದಾರ,ಡಾ|| ಪ್ರಕಾಶ ಬಿರಾದಾರ, ಶ್ರೀಶೈಲ ಕೋಟ್ಯಾಳ, ಬಾಳಾಸಾಹೆಬ, ಬಿರಾದಾರ, ಶಾಂತಪ್ಪ ಮಾಳಿ, ಗುರಪಾದ ಬಾಗಿ, ಮೋನೇಶ ಬಡಿಗೇರ, ರವಿ ತೊರವಿ, ರಮೇಶ ಬಿರಾದಾರ, ಪುಟ್ಟ ಸಾವಳಗಿ, ವಾಸು ಚವ್ಹಾಣ, ರಾಮು ಜಾಧವ ಇದ್ದರು. ಮುಂತಾದ ಎಲ್ಲಾ ಗ್ರಾಮಗಳ ಪ್ರಮುಖರು ಭಾಗವಹಿಸಿದ್ದರು.