ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕೂಲಿ ಕಾರ್ಮಿಕರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.07:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ನೂರಾರು ಮಹಿಳೆಯರು ಪಟ್ಟಣದಲ್ಲಿರುವ ತಾಲೂಕು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿಂದು ಪ್ರತಿಭಟನೆ ನಡೆಸಿದರು.


ಕರ್ನಾಟಕ ಪ್ರಾಂತ ಕೃಷಿ ಮತ್ತು ಗ್ರಾಮೀಣ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮತ್ತು ಜಿಲ್ಲಾಧ್ಯಕ್ಷ ಎಂ.ಶಿವಮಲ್ಲು ನೇತೃತ್ವದಲ್ಲಿ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ ಅವರ ವಿರುದ್ದ ಧಿಕ್ಕಾರದ ಘೊಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು.


ತಾಲೂಕಿನಾದ್ಯಂತ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ವ್ಯಾಪಕ ಬ್ರಷ್ಟಾಚಾರ ನಡೆಯುತ್ತಿದೆ. ಕಿಕ್ಕೇರಿ ಹೋಬಳಿಯ ಲಕ್ಷ್ಮಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬಸವನಹಳ್ಳಿ ಗ್ರಾಮದಲ್ಲಿ ಗೋ ಕಟ್ಟೆ ಅಭಿವೃದ್ದಿ ಕಾಮಗಾರಿ ಯೋಜನೆಯಡಿ ಸಸಿ ನೆಡುವ ಮತ್ತು ಜಂಗಲ್ ಕ್ಲೀನಿಂಗ್ ಮಾಡಿದ ಕೂಲಿ ಕಾರ್ಮಿಕರಿಗೆ ನಿಗಧಿತ ದರಕ್ಕಿಂತ ಕಡಿಮೆ ಕೂಲಿ ಹಾಕಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಒದಗಿಸುತ್ತಿಲ್ಲ. ಐದು ಕಿ.ಮೀ ಗಿಂತ ದೂರ ತೆರಳಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಪ್ರಯಾಣ ಭತ್ಯೆ ನೀಡುತ್ತಿಲ್ಲ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಕನಿಷ್ಠ 600 ರೂ ದಿನಗೂಲಿ ನೀಡಬೇಕು ಮತ್ತು ವರ್ಷದಲ್ಲಿ ಕನಿಷ್ಠ 200 ದಿನಗಳ ಕಾಲ ಕೂಲಿ ನೀಡಬೇಕು. ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಮಗ್ರ ಅಭಿವೃದ್ದಿಗಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು. ಸಾರ್ವತ್ರಿಕ ರೇಷನ್ ಪದ್ದತಿ ಜಾರಿಗೆ ತಂದು ಕಬ್ಬು, ಭತ್ತ ಮತ್ತು ರೇಷ್ಮೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು. ತಾಲೂಕು ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗ್ರಾಮೀಣರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಗತ್ಯ ವೈದ್ಯರನ್ನು ನೇಮಕ ಮಾಡಬೇಕು. ನಿವೇಶನ ರಹಿತರಾಗಿದ್ದು ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡವರಿಗೆ ಹಕ್ಕು ಪತ್ರ ನೀಡಬೇಕು. ಒತ್ತುವರಿಯಾಗಿರುವ ಸ್ಮಶಾನ ಭೂಮಿಯನ್ನು ತೆರವುಗೊಳಿಸಿ ಗ್ರಾಮಕ್ಕೊಂದು ಸ್ಮಶಾನ ಮಂಜೂರು ಮಾಡಿ ಅಭಿವೃದ್ದಿಪಡಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಆರ್.ಬಿ.ಐ ನಿರ್ದೇಶನದಂತೆ ಯಾವುದೇ ಭದ್ರತೆಯಿಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕನಿಷ್ಠ 2 ಲಕ್ಷ ರೂಗಳ ವರೆಗೆ ಸಾಲ ಸೌಲಭ್ಯ ಒದಗಿಸುವುದು ಸೇರಿದಂತೆ 42 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ.ಪಂ ಯೋಜನಾಧಿಕಾರಿ ಸಂದೀಪ್ ಅವರಿಗೆ ಮನವಿ ಪತ್ರ ಅರ್ಪಿಸಿದರು.


ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾಧ್ಯಕ್ಷ ಎಂ.ಶಿವಮಲ್ಲು, ಜಿಲ್ಲಾ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಎನ್.ಸುರೇಂದ್ರ, ತಾಲೂಕು ಘಟಕದ ಅಧ್ಯಕ್ಷ ಗಂಗೇನಹಳ್ಳಿ ಜಿ.ಹೆಚ್.ಗಿರೀಶ್, ಕಾರ್ಯದರ್ಶಿ ಗೋಪಾಲ್, ಉಪಾಧ್ಯಕ್ಷ ಸುರೇಶ್ ಪ್ರತಿಭಟನಾ ನಿರತ ಸ್ಥಳದಲ್ಲಿ ಮಾತನಾಡಿ ಬೇಡಿಕೆಗಳ ಹಕ್ಕೋತ್ತಾಯ ಮಾಡಿದರು. ಕೂಲಿ ಕಾರ್ಮಿಕರ ಸಂಘದ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿದ್ದರು.