ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ


ಬಾದಾಮಿ,ಮಾ.24:ತಾಲೂಕ ಹಡಪದ ಅಪ್ಪಣ್ಣ ಸೇವಾ ಸಮಾಜದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರದಂದು ಪ್ರತಿಭಟಿಸಿ ತಹಸೀಲ್ದಾರ್ ಸುಹಾಸ್ ಇಂಗಳೆ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿಯ ಪಿಕಾರ್ಡ ಬ್ಯಾಂಕ್ ಆವರಣದಿಂದ ಪ್ರತಿಭಟನೆ ಆರಂಭಗೊಂಡು ಟಾಂಗಾಕೂಟ, ರಾಮದುರ್ಗ ಕ್ರಾಸ್ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ತಮ್ಮ ಸಮಾಜಕ್ಕೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಅಧ್ಯಕ್ಷ ಡಾ. ವಿ.ಸಿ.ಬದಾಮಿ ಮಾತನಾಡಿ ಕ್ರೌರಿಕ ಅಭಿವೃದ್ಧಿ ನಿಗಮ ನಾಮಕರಣ, ಹಡಪದ ಸಮಾಜದ ಕುಲ ಅಧ್ಯಯನ ಮಾಡಲು ಯಾವುದೆ ವಿಶ್ವವಿದ್ಯಾಲಯಕ್ಕೆ ಆದೇಶಿಸಬೇಕು, ಸಮಾಜದ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ಹಾಗೂ ಸರಕಾರದಿಂದ ಶಿಷ್ಯವೇತನ ಸೌಲಭ್ಯ, ಸಮಾಜದ ಯುವಕ ಯುವತಿಯರಿಗೆ ಸರಕಾರದ ಎಲ್ಲ ಇಲಾಖೆಗಳಲ್ಲಿ ನೌಕರಿ ಮೀಸಲಾತಿ, ಬಡ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಸೌಲಭ್ಯ, ಸ್ಥಳೀಯ ಸಂಸ್ಥೆಗಳ ಮಳಿಗೆಗಳಲ್ಲಿ ಮಳಿಗೆ ಮೀಸಲಾತಿ, ಗ್ರಾಪಂ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರಲ್ಲದೆ ಈ ಎಲ್ಲ ಬೇಡಿಕೆಗಳು ಈಡೇರಿಸದಿದ್ದರೆ ನಾವೆಲ್ಲರೂ ಒಗ್ಗಟ್ಟಿನಿಂದ ಕ್ಷೌರಿಕ ವೃತ್ತಿಯಿಂದ ಹೊರಗುಳಿಯಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಶ್ರೀಶೈಲಪ್ಪ ಹಡಪದ, ಗೋವಿಂದಪ್ಪ ಹಡಪದ, ರಮೇಶ ಹಡಪದ, ಶರಣಪ್ಪ ಹಡಪದ, ಲಕ್ಷ್ಮಣ ಹಡಪದ, ಇಸಾಕ್ ಕಲೀಫಾ, ಬಸವರಾಜ ಹಡಪದ, ಎಸ್.ಎಂ.ಹಡಪದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.