ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆನ್‍ಲೈನ್ ಪ್ರತಿಭಟನಾ ಚಳುವಳಿ


ಬಾಗಲಕೋಟೆ, ಮೇ 22 : ಬಾಗಲಕೋಟ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ರಾಜ್ಯ ಸರಕಾರ ಪ್ಯಾಕೇಜ ಸಮರ್ಪಕವಾಗಿಲ್ಲ ಎಂದು ಎಐಯುಟಿಯುಸಿಗೆ ಸಂಯೋಜಿತವಾಗಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಆನ್ ಲೈನ್ ಪ್ರತಿಭಟನೆ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಪತ್ರವನ್ನು ಮೇಲ್ ಮುಖಾಂತರ ಕಳಿಸಲಾಯಿತು
ಆನ್ ಲೈನ್ ಚಳುವಳಿಯಲ್ಲಿ ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಲ್ಲಿ ಬೇಡಿಕೆಗಳನ್ನು ಬಿಂಬಿಸುವ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್ ಪ್ಯಾಕೇಜ್‍ನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ರೂ. 3000 ಪರಿಹಾರಧನ ಎಂದು ಘೋಷಣೆ ಮಾಡಿತ್ತು. ಆದರೆ ಮೊದಲೇ ಕೋವಿಡ್‍ನಿಂದ ಬಹಳಷ್ಟು ಕಾರ್ಮಿಕರು ಅಸ್ವಸ್ಥರಾಗಿರುವರು, ಅದರ ಮೇಲೆ ಕಟ್ಟಡ ನಿರ್ಮಾಣ ಕಾರ್ಮಿಕರು, ತಮ್ಮ ದಿನಗೂಲಿ ಇಲ್ಲದೇ ಮನೆಯಲ್ಲೇ ಇರುವಂತಹ ಪರಿಸ್ಥಿತಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳ ಜೊತೆಗೆ ದೈನಂದಿನ ಖರ್ಚುಗಳು ಹೆಚ್ಚುತ್ತಿದ್ದು ಅನೇಕರು ಸಾಲದ ಮೊರೆ ಹೋಗಿದ್ದಾರೆ. ಆದುದರಿಂದ ರಾಜ್ಯ ಸರ್ಕಾರ ಘೊಷಿಸಿರುವ ರೂ. 3000 ಪರಿಹಾರಧನ ಏನೇನು ಸಾಲುವುದಿಲ್ಲ, ಆದುದರಿಂದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಮಿಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಬೇಡಿಕೆಯಾಗಿ ಪ್ರತಿ ತಿಂಗಳಿಗೆ ಮಾಸಿಕರೂ. 10,000 ನ್ನು ಮೂರು ತಿಂಗಳಿಗೆ ಬಿಡುಗಡೆ ಮಾಡಬೇಕೆಂದು ಸಂಘವು ಆಗ್ರಹಿಸಿತು.

ಅದರ ಜೊತೆಗೆ ಕಳೆದ ವರ್ಷ ಘೋಷಿಸಲಾದ ಕೋವಿಡ್ ರೂ. 5000 ಪರಿಹಾರ ಹಣ ಬಾಕಿ ಇರುವ1ಲಕ್ಷ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು, ಕೋವಿಡ್-19ರ ಸೋಂಕಿನಿಂದ ಮೃತಪಡುವ ನೋಂದಾಯಿತ ಪ್ರತಿ ಕಟ್ಟಡ ಕಾರ್ಮಿಕ ಅಥವಾ ಸಾವಿಗೀಡಾಗುವ ಕುಟುಂಬದ ಸದಸ್ಯರಿಗೆ ಕನಿಷ್ಟ 10 ಲಕ್ಷರೂ. ಗಳ ವಿಶೇಷ ಪರಿಹಾರ ಧನವನ್ನು ಪ್ರಕಟಿಸಬೇಕು. ನೋಂದಾಯಿತರಲ್ಲದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕನಿಷ್ಟ 5 ಲಕ್ಷರೂ. ಪರಿಹಾರ ನೀಡಬೇಕು ಮತ್ತು ಕೋವೀಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಕಟ್ಡಡ ಕಾರ್ಮಿಕರ ಮತ್ತು ಅವರ ಕುಟುಂಬದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮಂಡಳಿಯೇ ಭರಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ(ರಿ)ವು ಆಗ್ರಹಿಸಿತು.

ಈ ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹೆಚ್ ಟಿ, ಕಮಲಾಬಾಯಿ ತೇಲಿ, ಇಬ್ರಾಹಿಂ ಬೆಪಾರಿ, ರಾಜಬಕ್ಷ ಜಾತಗಾರ, ಬಸವರಾಜ ತೇಲಿ, ಬಡಿಮಾ ಬೇಪಾರಿ, ಮುಂತಾದ ಕಾರ್ಮಿಕರು ಭಾಗವಹಿಸಿದ್ದರು.