
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.16:- ಭಾರತವೆಂದರೆ ಕೇವಲ ಒಂದು ಧರ್ಮವಲ್ಲ, ಒಂದು ಭಾಷೆಯಲ್ಲ, ಒಂದು ಸಂಸ್ಕೃತಿಯಲ್ಲ. ವಿವಿಧ ಧರ್ಮ, ಜಾತಿ, ಭಾಷೆ ಮತ್ತು ಸಂಸ್ಕೃತಿಗಳ ಸಮ್ಮಿಲ್ಲನವೇ ಭಾರತ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ನಾವಿಂದು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದ ಮಹಾತ್ಮ ಗಾಂಧಿ, ನೀವು ನನಗೆ ರಕ್ತಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದ ಸುಭಾಷ್‍ಚಂದ್ರಬೋಸ್, ಸ್ವಾತಂತ್ರ್ಯ ನನ್ನ ಅಜನ್ಮ ಸಿದ್ದ ಹಕ್ಕು, ಅದನ್ನು ಪಡೆದೇ ತೀರುತ್ತೇನೆ ಎಂದ ಬಾಲ ಗಂಗಾಧರ ತಿಲಕ್, ಇಂಕ್ವಿಲಾಬ್ ಜಿಂದಾಬಾದ್ ಎನ್ನುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಿದ ವೀರ ಭಗತ್ ಸಿಂಗ್, ಸಾರೇ ಜಹಾಂಸೇ ಅಚ್ಚಾ ಎಂದು ದೇಶ ಭಕ್ತಿಯ ರಸ ಗಾಳಿಯನ್ನು ಹರಡಿದ ಕವಿ ಮಹಮದ್ ಇಕ್ಬಾಲ್, ಸ್ವಾತಂತ್ರ್ಯ ನಂತರ ದೇಶದ ನಡೆಗೆ ಸಂವಿಧಾನದ ಮೂಲಕ ಅಡಿಪಾಯ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ರಂತಹ ಮಹನೀಯರನ್ನು ಸ್ಮರಿಸಿ ಅವರು ತೋರಿಸಿದ ದಾರಿಯಲ್ಲಿ ನಾವೆಲ್ಲ ಮುನ್ನಡೆಯಬೇಕು ಎನ್ನುವ ಮನೋ ಜಾಗೃತಿಯನ್ನು ಹೆಚ್ಚಿಸುವ ದಿನ ಎಂದರೆ ಅದು ಸ್ವಾತಂತ್ರ್ಯ ದಿನಾಚರಣೆಯ ದಿನ ಎಂದ ಶಾಸಕ ಹೆಚ್.ಟಿ.ಮಂಜು ನಮ್ಮ ಹಿರಿಯರು ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗೋಣ, ದೇಶ ಕಾಯುವ ಸೈನಿಕರು, ಅನ್ನ ಕೊಡುವ ರೈತರನ್ನು ಗೌರವಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡು ನಾವೆಲ್ಲರೂ ಸಮಾಜ ಮುಖಿಯಾಗಿ ಬಾಳೋಣ. ನಮ್ಮೊಳಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿ ಬದುಕೋಣ ಎಂದು ಕರೆ ನೀಡಿದರು.
ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕೃಷ್ಣರಾಜಪೇಟೆ ತಾಲೂಕಿನ ಕೊಡುಗೆಯನ್ನು ಸ್ಮರಿಸಿದ ಶಾಸಕ ಹೆಚ್.ಟಿ.ಮಂಜು 1942 ರ ಸೆಪ್ಟಂಬರ್ 19 ರ ರಾತ್ರಿ ನಮ್ಮ ತಾಲೂಕಿನ ಆನೆಗೊಳ ? ಕಿಕ್ಕೇರಿ ನಡುವಿನ ಟೆಲಿಗ್ರಾಫ್ ತಂತಿಯನ್ನು ನಮ್ಮ ಹೋರಾಟಗಾರರು ಕತ್ತರಿಸಿದರು. 1942 ರ ಸೆಪ್ಟಂಬರ್ 21 ರಂದು ತಾಲೂಕಿನ ತೆಂಡೇಕೆರೆ ಸಂತೆಯಲ್ಲಿ ಬ್ರಿಟೀಷರು ವಿಧಿಸಿದ್ದ ಸುಂಕ ವಿರೋಧಿ ಚಳುವಳಿ ಆರಂಭವಾಗಿತ್ತು.
ಹೊಸಹೊಳಲಿನ ಗೋವಿಂದೇಗೌಡ, ಗೋವಿಂದಶೆಟ್ಟರು, ಬಳ್ಳೇಕೆರೆಯ ಪುಟ್ಟಸ್ವಾಮೀಗೌಡ, ಶೀಳನೆರೆಯ ಕೆ.ಎಸ್.ಬೋರೇಗೌಡ, ಮಡುವಿನಕೋಡಿ ಸಿದ್ದೇಗೌಡ, ಕಿಕ್ಕೇರಿಯ ನರಸೇಗೌಡ, ಬಿದರಹಳ್ಳಿಯ ಶಿವರಾಮಯ್ಯ ಮುಂತಾದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಹೆಜ್ಜೆಗುರುತುಗಳನ್ನು ಸ್ಮರಿಸಿದರು.
ಧ್ವಜಾರೋಹಣ ಮಾಡಿ ಧ್ವಜ ಸಂದೇಶ ನೀಡಿದ ತಹಸೀಲ್ದಾರ್ ನಿಸರ್ಗಪ್ರಿಯ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡು ಬಲಿಷ್ಠ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸಬೇಕೆಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಪುರಸಭೆಯ ಅಧ್ಯಕ್ಷೆ ಮಹಾದೇವಿ, ಉಪಾಧಕ್ಷೆ ಗಾಯಿತ್ರಿ, ಸದಸ್ಯರಾದ ತಿಮ್ಮೇಗೌಡ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಟಿ.ಬಲದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮ್, ಬಿ.ಸಿ.ಎಂ ಅಧಿಕಾರಿ ವೆಂಕಟೇಶ್, ಪೆÇಲೀಸ್ ನಿರೀಕ್ಷಕರಾದ ಎಂ.ಕೆ.ದೀಪಕ್, ಜಗದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು ಮತ್ತು ಸಾರ್ವಜನಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.