ವಿವಿಧ ಚಟುವಟಿಕೆ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬೇಕು -ಸುಮಾ. ಬಿ. ಕರಿಗಾರ್.

ಕೂಡ್ಲಿಗಿ.ನ.21:- ಕಥೆ, ಅಭಿನಯ, ಗೀತೆ,ಹಾಡು, ಇನ್ನಿತರೆ ಚಟುವಟಿಕೆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಬೆಳಗಟ್ಟ ‘ಎ’ ವಲಯದ ಮೇಲ್ವಿಚಾರಕಿ ಸುಮಾ ಬಿ ಕರಿಗಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ನಡೆದ ಬೆಳಗಟ್ಟ ‘ಎ’ ವಲಯದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲಾ ಪೂರ್ವ ಶಿಕ್ಷಣ ಮಕ್ಕಳಿಗೆ ಮನದಟ್ಟಾಗಲು ಆಟಿಕೆ ಪಾಟಿಕೆಗಳ ಮೂಲಕ ಹೇಳಿದಲ್ಲಿ ಅದನ್ನು ಬಹುಬೇಗ ಮಕ್ಕಳು ಮನಸ್ಸಿನಲ್ಲಿ ಗ್ರಹಿಸಿಕೊಳ್ಳುತ್ತವೆ ಎಂದರು
ಉದ್ಘಾಟನೆ ನೆರವೇರಿಸಿದ ಕಕ್ಕುಪ್ಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಚ್ಚೆಂಗೆಮ್ಮ ಮಾತನಾಡಿ ಶಾಲಾ ಪೂರ್ವ ಶಿಕ್ಷಣ ಮಕ್ಕಳಿಗೆ ಮುಟ್ಟಲು ಮಕ್ಕಳಲ್ಲಿ ಮಕ್ಕಳಾಗಿ ಕಾರ್ಯಕರ್ತೆಯರು ವಿವಿಧ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಬೇಕು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೀವೇ ದಾರಿದೀಪರಾಗಬೇಕೆಂದು ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದರು.
ತರಬೇತಿಯ ಸಂಯೋಜಕರಾಗಿ ಆಗಮಿಸಿದ ಯು.ಪಿ. ತಪಸ್ವಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಹಂತಗಳಲ್ಲಿ ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರಿಗೆ ಹಾಡು, ಗೀತೆ, ಕಥೆ ಅಭಿನಯ ಆಟಿಕೆ ಪಾಟಿಕೆಗಳ ಮೂಲಕ ಶಿಕ್ಷಣ ನೀಡಿದಲ್ಲಿ ಬಹುಬೇಗ ಅರ್ಥೈಸಿಕೊಳ್ಳುತ್ತವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮೇಲ್ವಿಚಾರಕರು ಪಡೆದ ತರಬೇತಿಯನ್ನು ಕಾರ್ಯಕರ್ತೆಯರಿಗೆ ಮನದಟ್ಟಾಗುವಂತೆ ತಿಳಿಸಬೇಕು ಎಂದರು.