ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕೆ.ಆರ್.ಪೇಟೆ.ನ.20: ಗ್ರಾಮಗಳು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿ ಅಭಿವೃದ್ದಿಯಾದಾಗ ಮಾತ್ರ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಪೌರಾಡಳಿತ ರೇಷ್ಮೆ ಮತ್ತು ತೋಟಗಾರಿಕೆ ಹಾಗು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.
ಅವರು ತಾಲ್ಲೂಕಿನ ಹರಿಹರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಯಾವ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ವಿದ್ಯುತ್, ಗುಣಮಟ್ಟದ ರಸ್ತೆ, ಶಾಲೆ, ಅಂಗನವಾಡಿ, ಆಸ್ಪತ್ರೆ, ಸಾರಿಗೆ ಸೌಕರ್ಯ ಮುಂತಾದ ಅಗತ್ಯ ಮೂಲಭೂತ ಸೌಕರ್ಯಗಳು ಇರುತ್ತವೆಯೋ ಆ ಗ್ರಾಮದ ಜನತೆ ಸಮೃದ್ದಿಯ ಜೀವನ ನೆಡೆಸುತ್ತಾರೆ. ಇಡೀ ಗ್ರಾಮವೇ ಆದರ್ಶ ಗ್ರಾಮವಾಗುತ್ತದೆ. ಇಂಥಹ ನೂರಾರು ಗ್ರಾಮಗಳು ಅಭಿವೃದ್ದಿ ಹೊಂದಿದಾಗ ಮಹಾತ್ಮಾ ಗಾಂಧೀಜಿಯವರು ಕನಸುಕಂಡಿದ್ದ ಗ್ರಾಮಸ್ವರಾಜ್ ಕಲ್ಪನೆ ಈಡೇರುತ್ತದೆ.ಆದ್ದರಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ರಸ್ತೆ, ಹಾಗೂ ಚರಂಡಿ ಕಾಮಗಾರಿಗಳನ್ನು ನಿರ್ಮಿಸಲಾಗುತ್ತಿದೆ,ನನ್ನ ಕಾಲದಲ್ಲಿ ಅಭಿವೃದ್ದಿಗೆ ಒತ್ತುಕೊಟ್ಟು ಕೆಲಸ ಮಾಡುತ್ತಿದ್ದೇನೆ, ಇಂದಿನ ಅಭಿವೃದ್ಧಿ ಕೆಲಸಗಳು ಮುಂದಿನ ದಿನಗಳಲ್ಲಿ ನಮ್ಮ ಹೆಸರು ಹೇಳುತ್ತವೆ. ತಾಲ್ಲೂಕಿನಲ್ಲಿ ಬರಡುಭೂಮಿಯಾಗಿದ್ದ ಬೂಕನಕೆರೆ ಮತ್ತು ಶೀಳನೆರೆ, ಸಂತೇಬಾಚಹಳ್ಳಿ ಹೋಬಳಿಗಳಿಗೆ ಏತ ನೀರಾವರಿಯ ಮೂಲಕ ಕೆರೆಕಟ್ಟೆಗಳನ್ನು ತುಂಬಿಸುವ ಕಾಮಗಾರಿ ಪ್ರಾರಂಭವಾಗಿದ್ದು ಇದರಿಂದಾಗಿ ರೈತರು ಉತ್ತಮವಾಗಿ ವ್ಯವಸಾಯ ಮಾಡಲು ಸಹಕಾರಿಯಾಗಲಿದೆ, ಮತ್ತು ಕೊಳವೆಬಾವಿಗಳಿಗೂ ಅಂತರ್ಜಲ ಹೆಚ್ಚಾಗಲಿದೆ, ಮುಂದಿನ ದಿನಗಳಲ್ಲಿ ಕೆ.ಆರ್.ಎಸ್.ನಿಂದ ತಾಲ್ಲೂಕಿನ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂಥಹ ಹೀನಕೃತ್ಯಕ್ಕೆ ಕೈ ಹಾಕಬಾರದು ಬದುಕಿ ತೋರಿಸಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಬಿಜೆಪಿ ಅದ್ಯಕ್ಷ ಬೂಕಹಳ್ಳಿ ಮಂಜು, ಸತೀಶ್, ರಾಮೇಗೌಡ,ಕುಮಾರ, ಜೈನ್ನಹಳ್ಳಿ ಗೌಡಪ್ಪ, ಅಭಿ, ಸಚಿವರ ಆಪ್ತ ಸಹಾಯಕ ದಯಾನಂದ್ ಕೊಮ್ಮೇನಹಳ್ಳಿ ಅನಿಲ್,ಕೌಶಿಕ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.