ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರಿಗೆ ಸನ್ಮಾನ

ದಾವಣಗೆರೆ.ಮಾ.೨೨; ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು  ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗೌರವಿಸಿದರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಸ್ವಂತ ಶಾಸಕರೇ ವಿವಿಧ ಕ್ಷೇತ್ರಗಳ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿದ್ದು, ಇದಕ್ಕೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕವು ಸಹ ಸಹಕಾರ ನೀಡುತ್ತಿದೆ. ನಗರದ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೃಹ ಕಛೇರಿ ಶಿವಪಾರ್ವತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಿದ  ಡಾ. ಶಾಮನೂರು ಶಿವಶಂಕರಪ್ಪನವರು ತಮ್ಮ ಕಾರ‍್ಯಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.12ನೇ ಶತಮಾನದಲ್ಲಿ ಮಹಿಳೆಯರು ಪುರುಷರಷ್ಟೇ ಸರಿ ಸಮಾನರು ಎಂಬುದನ್ನು ಪ್ರತಿಪಾದಿಸಿದ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸ್ಥಾನ ಕಲ್ಪಿಸುವ ಮೂಲಕ ಜಾರಿಗೆ ತಂದರು. ಇಂದು ದೇಶದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಸಾಧನೆ ಮೆರೆದಿದ್ದಾರೆ. ರಾಜಕೀಯ ಮತ್ತು ಶೈಕ್ಷಣಿಕವಾಗಿ ಪುರುಷರಷ್ಟೇ ಸಮಾನರಾಗಿರುವ ಮಹಿಳೆಯರಿಗೆ ಸಾಮಾಜಿಕವಾಗಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.ದಾವಣಗೆರೆ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರಿಯಾಂಕ, ಮಾಧವಿ ಡಿ.ಕೆ. ಗೋಪಾಲಕೃಷ್ಣ, ಉಪನ್ಯಾಸಕಿ ಓಂಕಾರಮ್ಮ ಅವರುಗಳು ಗೌರವ ಪಡೆದು ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್, ಕವಿತಾ ಚಂದ್ರಶೇಖರ್, ಉಮಾಕುಮಾರ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಆಶಾಮುರುಳಿ, ಶುಭಮಂಗಳ, ನಾಗರತ್ನಮ್ಮ ಮತ್ತಿತರರಿದ್ದರು.