ವಿವಿಧ ಕಾಮಗಾರಿ ಪರಿಶೀಲನೆ


ಕುಂದಗೋಳ ನ.22 : ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಸೇರಿದಂತೆ ಹಲವಾರು ಕಾರ್ಯಗಳನ್ನು ಸಿಇಒ ಡಾ: ಬಿ.ಸುಶೀಲಾ ಹಾಗೂ ಯೋಜನಾಧಿಕಾರಿ ಮೂಗನೂರಮಠ ಅವರು ಕುಂದಗೋಳ ತಾಲೂಕಿನ ಬೆಟದೂರು, ಮಳಲಿ, ರೊಟ್ಟಿಗವಾಡ ಮತ್ತು ಯರಗುಪ್ಪಿ ಗ್ರಾಮಗಳಿಗೆ ಭೇಟಿನೀಡಿ ಪರಿಶೀಲಿಸಿದರು.
ಘನತ್ಯಾಜ್ಯ ವಿಲೇವಾರಿಗಾಗಿ ಖರೀದಿಸುವ ವಾಹನಗಳನ್ನು ಆದಷ್ಟು ಬೇಗ ಖರೀದಿಸಬೇಕು. ಅಲ್ಲದೆ ಶೌಚಾಲಯಗಳಿಲ್ಲದ ಅನೇಕ ಕುಟುಂಬಗಳಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರೇಪಿಸಬೇಕು. ಈಗಾಗಲೇ ಈ ಕಾರ್ಯಕ್ಕೆ ಬಿಡುಗಡೆಯಾಗಿರುವ ಹಣವನ್ನು ಫಲಾನುಭವಿಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು. ಆಲಜೀವನ ಮಿಷನ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಕಾಮಗಾರಿಗಳು ಸಾಧ್ಯವಾದಷ್ಟು ಬೇಗ ಮುಗಿಯುವಂತಾಗಬೇಕು. ಅಲ್ಲದೆ ಮುಖ್ಯವಾಗಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಘನತ್ಯಾಜ್ಯ ಸಂಗ್ರಹ ಘಟಕಗಳ ಕಾಮಗಾರಿಗಳು ನವಂಬರ್ ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಸಿಇಒ ಡಾ: ಬಿ.ಸುಶೀಲಾ ಸ್ಥಳದಲ್ಲಿದ್ದ ಆಯಾ ಗ್ರಾ.ಪಂ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.
ಇಓ ಡಾ:ಮಹೇಶ ಕುರಿಯವರ, ಸಹಾಯಕ ಯೋಜನಾಧಿಕಾರಿ ಸಂತೋಷ ತಳಕಲ್ಲ ಸೇರಿದಂತೆ ಆಯಾ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾ.ಪಂ ಸಿಬ್ಬಂದಿ ಇದ್ದರು.