
ಬೈಲಹೊಂಗಲ,ಫೆ25: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ಒತ್ತು ನೀಡುತ್ತಿದ್ದಾರೆಂದು ಜಲಸಂಪನ್ಮೂಲ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣವಾದ ನೂತನ ಕೇಂದ್ರ ಬಸ್ ನಿಲ್ದಾಣದ ಕಟ್ಟಡದ, ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿದ ನೂತನ ಕೆರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡದ ಉದ್ಘಾಟಣಾ ಸಮಾರಂಭವನ್ನು ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ನೆರವೇರಿಸಿ ಮಾತನಾಡಿ, 1957 ರಲ್ಲಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ನೀಡುವ ದೃಷ್ಟಿಯಿಂದ ಸಾರಿಗೆ ಘಟಕ ಪ್ರಾರಂಬಿಸಲಾಗಿತ್ತು. ಘಟಕ ಮರು ನಿರ್ಮಾಣ ಮಾಡಲು 2019-20 ರಲ್ಲಿ 500 ಲಕ್ಷ ರೂದಲ್ಲಿ ಮೊದಲ ಹಂತದ ಕಾಮಗಾರಿ, 200 ಲಕ್ಷರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗೆ ಬಿಡುಗಡೆ ಮಾಡಲಾಗಿದೆ. ಘಟಕದಿಂದ ನಿತ್ಯ 128 ವಾಹನಗಳಿಂದ 41 ಸಾವಿರ ಕಿ.ಮೀ ಗಳ ಕಾರ್ಯಾರಣೆ ಮಾಡಲಾಗುತ್ತಿದೆ. ಇದರಿಂದ ಪ್ರತಿದಿನ 10.60 ಲಕ್ಷ ರೂ. ಸಾರಿಗೆ ಸಂಗ್ರಹವಾಗುತ್ತಿದೆ. ಪ್ರತಿನಿತ್ಯ ಸುಮಾರು 60250 ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜನತೆಯ ಅನುಕೂಲಕ್ಕಾಗಿ 48 ವರ್ಷಗಳ ಹಿಂದಿನ ವರ್ಷ ಸಚಿವರಾದ ಡಿಸಿ ತಮ್ಮಣ್ಣ ಶ್ರೀರಾಮುಲು ಅನುದಾನ ನೀಡಿದ್ದು 7 ಕೋಟಿ ರೂ. ವೆಚ್ಚದ ಸುಸಜ್ಜಿತ ಬಸ್ ನಿಲ್ದಾಣದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಖಾ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ವಾಯುವ್ಯ ಸಾರಿಗೆ ಸಂಸ್ಥೆ ನಿಗಮದ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಸಂಸದೆ ಮಂಗಲಾ ಅಂಗಡಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ,ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಉಪಾದ್ಯಕ್ಷೆ ಲಕ್ಷ್ಮೀ ಬಡ್ಲಿ, ಪುರಸಭೆ ವಿರೋಧ ಪಕ್ಷದ ನಾಯಕ ಶಿವಾನಂದ ಕೋಲಕಾರ, ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪೂರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿ ಗಣೇಶ ರಾಥೋಡ್,ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ಎಸ್.ಎಸ್.ತಳವಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೆಶಕರಾದ ಅಶೋಕ ಮಾಳಗಿ, ಸದಾಶಿವ ತೇಲಿ, ತಹಶೀಲ್ದಾರ ಜಯದೇವ ಅಷ್ಠಗಿಮಠ,ತಾ. ಪಂ ಇಓ ಸುಭಾಸ ಸಂಪಗಾವಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಮುಖಂಡರಾದ ಸುರೇಶ ಯರಡ್ಡಿ, ಅಡಿವೆಪ್ಪ ಹೊಸಮನಿ, ವಾಯ್.ಟಿ.ಬಾಗಾರ, ಎಂ.ಎ.ಆನಿಕಿವಿ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.