ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಹುಬ್ಬಳ್ಳಿ, ಏ29: ಇಲ್ಲಿನ ವಾರ್ಡ ನಂ. 59ರ ಪಡದಯ್ಯನ ಹಕ್ಕಲದಲ್ಲಿ 20 ಲಕ್ಷ ರೂ. ವೆಚ್ಚದ ತೆರೆದ ಚರಂಡಿ ಹಾಗೂ ಕೌದಿಮಠ ಸ್ಮಶಾನ ಆವರಣದಲ್ಲಿ ಕೈಗೊಂಡಿರುವ 15 ಲಕ್ಷ ರೂ. ವೆಚ್ಚದ ಪೇವರ್ಸ್ ಮತ್ತು ವಾರ್ಡ ನಂ. 65ರ ಅಲ್ತಾಫ್ ಪ್ಲಾಟ್‍ನಲ್ಲಿ 40 ಲಕ್ಷ ರೂ. ವೆಚ್ಚದ ತೆರೆದ ಚರಂಡಿ ನಿರ್ಮಾಣ ಸೇರಿದಂತೆ ಒಟ್ಟು 75 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಭಾಗದ ಬಹುತೇಕ ಬಡಾವಣೆಗಳು ವಿವಿಧ ಅಭಿವೃದ್ಧಿ ಕಾರ್ಯಗಳಿಂದ ಕಂಗೊಳಿಸುತ್ತಿವೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ, ಅಗತ್ಯ ಮೂಲ ಸೌಕರ್ಯಗಳೊಂದಿಗೆ ಈ ಭಾಗದ ಸ್ಲಂ ಪ್ರದೇಶಗಳು ಪ್ರಗತಿ ಹೊಂದಿದ್ದು, ಇನ್ನುಳಿದ ಪ್ರದೇಶಗಳನ್ನೂ ಸಹ ಹಂತಹಂತವಾಗಿ ಅಭಿವೃದ್ಧಿಪಡಿಸಿ ಹಳೇ ಹುಬ್ಬಳ್ಳಿ ಭಾಗಕ್ಕೆ ಇನ್ನಷ್ಟು ಆಕರ್ಷಕ ಮೆರಗು ನೀಡಲಾಗುವುದು ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ಅಲ್ತಾಫ್ ಕಿತ್ತೂರು, ಮುಖಂಡರಾದ ಇಲಿಯಾಸ್ ಮನಿಯಾರ್, ತಾಜುದ್ದಿನ್ ಮುನವಳ್ಳಿ, ಮುಸ್ತಾಕ್ ಕಿಲ್ಲೇದಾರ್, ಇಕ್ಬಾಲ್ ಕರಡಿಗುಡ್ಡ, ಖಾಜಾ ತಡಕೋಡ, ಅಲ್ಲಾಬಕ್ಷ್ ಸವಣೂರು, ದಾವಲಸಾಬ್ ಮುಲ್ಲಾ, ಇಮಾಂಸಾಬ್ ಪಠಾಣ್, ಆಸೀಫ್ ಪಲ್ನಾ, ಸಾದಿಕ್ ಅಸುಂಡಿ, ಮೆಹಬೂಬ್ ನಾಲಬಂದ್, ಎಂ.ಎ. ಮಸೂತಿ, ಪಾಲಿಕೆ ಅಧಿಕಾರಿ ರಿಯಾಜ್, ಸುನಂದಾ ಚಿಕ್ಕಮಠ, ಇತರರು ಇದ್ದರು.