ವಿವಿಧ ಕಾಮಗಾರಿಗಳಿಗೆ ಚಾಲನೆ

ರಾಮದುರ್ಗ, ನ4- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಉಪಯೋಗವಾಗುವ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು ಬರುವ ದಿನಗಳಲ್ಲಿ ರೈತರಿಗೆ ಒಳ್ಳೇಯ ದಿನಗಳು ಬರಲಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮಂಗಳವಾರ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲೂಕಿನ ಘಟಕನೂರದಲ್ಲಿ ರೂ.541.06 ಲಕ್ಷ ವೆಚ್ಚದ ಎಂಆರ್‍ಎಲ್-18 ಹೊಸೂರ ರಸ್ತೆಯಿಂದ ರಾಜ್ಯ ಹೆದ್ದಾರಿ ವರೆಗೆನ ರಸ್ತೆ ಅಭಿವೃದ್ಧಿ, ರೂ.506.34 ಲಕ್ಷ ವೆಚ್ಚದ ಕಟಕೋಳ ಎಂ. ಚಂದರಗಿ ರಸ್ತೆ ಅಭಿವೃದ್ಧಿ, ರೂ. 728.12 ಲಕ್ಷ ವೆಚ್ಚದಲ್ಲಿ ಎಂಆರ್‍ಎಲ್-27 ಪಂಚಗಾಂವದಿಂದ ಬೂದನೂರ (ವ್ಯಾಯಾ ಗುಡಗಮನಾಳ) ರಸ್ತೆ ಅಭಿವೃದ್ಧಿ, ರೂ. 527.63 ಲಕ್ಷ ವೆಚ್ಚದಲ್ಲಿ ಚಿಪ್ಪಲಕಟ್ಟಿಯಿಂದ ತೊಂಡಿಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ರೂ. 20 ಲಕ್ಷ ಅನುದಾನದಲ್ಲಿ ಬಿಜಗುಪ್ಪಿಯಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ಕೇವಲ ಮುಖ್ಯ ರಸ್ತೆ ಅಭಿವೃದ್ಧಿ ಮಾಡದೇ ರೈತರ ಜಮೀನುಗಳ ರಸ್ತೆ ಸುಧಾರಣೆಗೆ ಗ್ರಾಮ ಸಡಕ ಯೋಜನೆ ಜಾರಿಗೆ ತಂದು ಗ್ರಾಮೀಣ ರೈತರ ಕಲ್ಯಾಣಕ್ಕೆ ಮುಂದಾಗಿದ್ದರು ಎಂದು ಹೇಳಿದರು.
ಕೇಂದ್ರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಯುವಕರು ಮಾಡಬೇಕು ಅಂದರೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವೆಂದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಕಲ್ಯಾಣಕ್ಕೆ ಬದ್ಧವಾಗಿದ್ದು ಸರ್ಕಾರದ ಅನುದಾನ ಸದುಪಯೋಗವಾಗಲು ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.
ಜನತೆ ಸಹಿತ ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳೊಂದಿಗೆ ಉಸ್ತುವಾರಿ ಮಾಡಬೇಕು ಅಂದರೆ ಮಾತ್ರ ಒಳ್ಳೇಯ ಕಾಮಗಾರಿಯಾಗಲು ಸಾಧ್ಯವಿದೆ ಎಂದು ಹೇಳಿದರಲ್ಲದೆ ರಸ್ತೆ ಕಾಮಗಾರಿ ಮಾಡುವ ವೇಳೆ ರಸ್ತೆ ಬದಿಯ ಜಮೀನುಗಳ ಮಾಲೀಕರು ಒತ್ತುವರಿಯಾಗಿದ್ದರೆ ತೆರವು ಮಾಡುವ ಮೂಲಕ ಸುಗಮ ಕೆಲಸಕ್ಕೆ ಸಹಕರಿಸಬೇಕು ಎಂದು ಹೇಳಿದರು.
ರಸ್ತೆ ಕಾಮಗಾರಿ ಕೈಗೊಳ್ಳುವ ವೇಳೆ ರಸ್ತೆ ಬದಿ ಗಿಡ ನೆಡಲು ಅನುಕೂಲವಾಗುವಂತೆ ಕೆಲಸ ಮಾಡವ ಮೂಲಕ ಪರಿಸರ ಸಂರಕ್ಷಣೆಗೆ ಅವಕಾಶ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಮಚಾಯ್ತಿ ಸದಸ್ಯರಾದ ಮಾರುತಿ ತುಪ್ಪದ, ರಮೇಶ ದೇಶಪಾಂಡೆ, ಡಿಸಿಸಿ ಬ್ಯಾಂಕ ನಿರ್ದೇಶಕ ಎಸ್. ಎಸ್. ಡವಣ, ಎಪಿಎಂಸಿ ಸದಸ್ಯ ಮಾರುತಿ ಕೊಪ್ಪದ, ಎಂ. ಎಂ. ಆತಾರ, ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ, ಘಟಕನೂರ ಗ್ರಾಪಂ ಮಾಜಿ ಅಧ್ಯಕ್ಷ ಬೀರಸಿದ್ದಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಎಇಇ ಎಸ್. ಎಸ್. ಸೊಬರದ, ಎಇ ಡಿ. ಜಿ. ಜುಗತಿ, ಜೆಇ ಮಹಾದೇವ ಅಲ್ಲೋಳಿ ಸೇರಿದಂತೆ ಹಲವರಿದ್ದರು.