ವಿವಿಧ ಕಳ್ಳತನ ಪ್ರಕರಣಗಳ ಆರೋಪಿಗಳ ಬಂಧನ:29.77 ಲಕ್ಷ ರೂ.ಮೌಲ್ಯದ ಸ್ವತ್ತು ಜಪ್ತಿ

ಬೀದರ, ಸೆ.9: ಬೀದರ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಒಂಬತ್ತು ಪ್ರತ್ಯೇಕ ಕಳ್ಳತನ ಪ್ರಕರಣವನ್ನು ಭೇದಿಸಿ 16 ಆರೋಪಿಗಳನ್ನು ಬಂಧಿಸಿ ಅವರಿಂದ 29.77 ಲಕ್ಷ ರೂ.ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಲಾರಿ ಕಳ್ಳತನ ಮತ್ತು ಎರಡು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತಗಳನ್ನು ಬಂಧಿಸಿ ಅವರಿಂದ 3,03,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ರೂ.ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಂತರಾಜ್ಯ ಕಳ್ಳನನ್ನು ಬಂಧಿಸಿ ಆತನಿಂದ 15 ಲಕ್ಷ ರೂ. ಮೌಲ್ಯದ ಮೂರು ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅದೇ ರೀತಿ ಖಟಕ ಚಿಂಚೋಳಿಯ ಬ್ಯಾಲಹಳ್ಳಿ (ಡಬ್ಲ್ಯೂ) ಗ್ರಾಮದ ಅನೀಲಕುಮಾರ ಬಿರಾದಾರ ಅವರ ಮನೆಯಲ್ಲಿ ಕಳ್ಳತನವಾದ ಸೋಯಾ ಬೆಳೆ 37 ಗೋಣಿ ಚಿಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಅವರಿಂದ 92000 ರೂ.ನಗದು ಹಾಗೂ 5 ಲಕ್ಷ ರೂ. ಮೌಲ್ಯದ ಒಂದು ಟಾಟಾ ಎ.ಸಿ.ವಾಹನ ಜಪ್ತಿ ಪಡಿಸಲಾಗಿರುತ್ತದೆ. ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಲಾಪೂರ ಗ್ರಾಮದ ಜಹೀರಮಿಯ್ಯಾ, ಜನವಾಡ ಗ್ರಾಮದ ವಿದ್ಯಾನಂದ ಹಾಗೂ ಅಣದೂರ ಬಳಿಯ ಗ್ಲೋಬಲ್ ಮಲ್ಟಿ ಡವಲಪಮೆಂಟ ಟ್ರಸ್ಟ್ ಶಾಲೆಯ ಹತ್ತಿರ ಇಟ್ಟಿದ್ದ ಸೆಂಟ್ರಿಂಗ್ ಪ್ಲೇಟಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ 1,12,000 ರೂ.ಮೌಲ್ಯದ ಚಿನ್ನಾಭರಣ, 70,000 ರೂ.ಮೌಲ್ಯದ ಎರಡು ದ್ವಿಚಕ್ರ ವಾಹನ ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಟಾಟಾ ಯೆಸ್ ವಾಹನ ಜಪ್ತಿ ಮಾಡಿ ಆರೋಪಿತಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಭಾಲ್ಕಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಪವಾಡಶೆಟ್ಟಿ, ಮಠಾಳ ಸಿಪಿಐ ವಿಜಯಕುಮಾರ, ಸಿಪಿಐ ಶ್ರೀನಿವಾಸ ಅಲ್ಲಾಪೂರ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.