ವಿವಿಧ ಕಡೆ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ

ರಾಯಚೂರು,ಸೆ.೨೫-ನಗರದ ಹರಿಜನವಾಡ ಹಾಗೂ ಮಡ್ಡಿಪೇಟೆದಲ್ಲಿ ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ, ಜಾಗೃತಿ ಕಾರ್ಯಕ್ರಮವನ್ನು ಮಾಡಲಾಯಿತು.
ವಲಯದ ಮೇಲ್ವಿಚಾರಕಿ ಮೂಕಾಂಬಿಕಾ ಅವರು ಮಾತನಾಡಿ, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದನ್ನು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು. ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ, ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಸದಾ ನಿಗಾವಹಿಸಬೇಕು. ಇದರಿಂದ ಎರಡೂ ಜೀವಗಳು ಅನಾರೋಗ್ಯಕ್ಕೆ ತುತ್ತಾಗುವ ಅಪಾಯಗಳು ಹೆಚ್ಚಾಗಲಿವೆ.
ಮನೆಯಂಗಳದಲ್ಲಿ ಕೈತೋಟ ಬೆಳೆಸುವುದು, ಮಕ್ಕಳಿಗೆ ಕೋಳಿ ಮೊಟ್ಟೆ, ಮೊಳಕೆ ಕಾಳು ತಿನ್ನಿಸುವುದು ಮೊದಲಾಗಿ ಒಂದು ತಿಂಗಳ ಕಾಲ ಪೋಷಣ್ ಅಭಿಯಾನ ಮಾಸಾಚರಣೆಯ ಉದ್ದೇಶವಾಗಿದೆ. ಈ ಕುರಿತಂತೆ ತಾಯಂದಿರಲ್ಲಿ ಅರಿವು ಮೂಡಿಸಲು ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಸಲಾಗುತ್ತಿದೆ’ ಎಂದರು.
ಬಾಲವಿಕಾಸ ಸಲಹಾ ಸಮಿತಿ ಅಧ್ಯಕ್ಷ ಸಂಗಮೇಶ್ವರ, ವಲಯ ಮೇಲ್ವಿಚಾರಕಿಯರು ಲಕ್ಷ್ಮೀ, ಹುಲಿಗೆಮ್ಮ, ಭಾಗ್ಯಲಕ್ಷ್ಮೀ, ವಿಜಯಕುಮಾರ್ ತಿರುಮಾಲಾ ಸೇರಿದಂತೆ ಇತರರು ಇದ್ದರು.