ವಿವಿಧ ಕಡೆ ದರೋಡೆ ಪ್ರಕರಣ: ೯ ಮಂದಿ ಸೆರೆ

ಮಂಗಳೂರು, ಎ.೫- ಮೂಡಬಿದ್ರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣೆ ಸರಹದ್ದು ಸೇರಿದಂತೆ ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಡೆ ಹಲವಾರು ಮನೆ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು ೯ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿವಿಧ ಜಿಲ್ಲೆಗಳ ಹಾಗೂ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಆರೋಪಿಗಳು ಮೂರ್ನಾಲ್ಕು ತಂಡಗಳೊಂದಿಗೆ ಕಾರ್ಯಾಚರಿಸುತ್ತಿದ್ದರು ಎಂದು ಅವರು ಹೇಳಿದರು. ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಮತ್ತವರ ಸಿಬ್ಬಂದಿ ಎಪ್ರಿಲ್ ೧ರಂದು ಅಬ್ದುಲ್ ರವೂಫ್ (೨೪), ರಾಮಮೂರ್ತಿ (೨೩) ಎಂಬವರನ್ನು ಬಂಧಿಸಿದ್ದರು. ಎ. ೨ರಂದು ಅಶ್ರಫ್ ಪೆರಾಡಿ (೨೭), ಸಂತೋಷ್ (೨೪), ನವೀದ್ (೩೬), ರಮಾನಂದ ಎನ್. ಶೆಟ್ಟಿ (೪೮), ಸುಮನ್ (೨೪), ಸಿದ್ದೀಕ್ (೨೭), ಅಲಿಕೋಯ ಎಂಬವರನ್ನು ಬಂಧಿಸಲಾಗಿದ್ದು, ಇವರೆಲ್ಲರ ವಿರುದ್ಧ ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದವರು ಹೇಳಿದರು. ಬಂಧಿತರಿಂದ ಇನ್ನೋವಾ ಕಾರು, ಟಾಟಾ ಜೆಸ್ಟ್ ಕಾರು, ಮಾರುತಿ ಕಾರು, ಆಟೋರಿಕ್ಷಾ, ೧೧ ಮೊಬೈಲ್‌ಗಳು, ೪ ದ್ವಿಚಕ್ರ ವಾಹನ, ಒಂದ ಏರ್‌ಗನ್, ಚಿನ್ನದಂತಿರುವ ಒಡವೆಗಳು ಸೇರಿದಂತೆ ಒಟ್ಟು ೩೨.೨೨ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಆರೋಪಿಗಳಿಂದ ೨ ತಲವಾರುಗಳು, ಕಬ್ಬಿಣದ ರಾಡು, ಉದ್ದನೆಯ ಚಾಕು, ಒಂದು ಪ್ಯಾಕೆಟ್ ಖಾರದ ಹುಡಿ, ಮರದ ದೊಣ್ಣೆಯಂತಹ ಮಾರಕಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ನೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.< ನಾಲ್ವರು ಪ್ರಮುಖ ಆರೋಪಿಗಳು ಸೇರಿದಂತೆ ಇನ್ನೂ ೧೫ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವ ಮಾಹಿತಿ ಇದ್ದು, ಆರೋಪಿಗಳಿಗೆ ಕೃತ್ಯವೆಸಗಲು ವಾಹನ ನೀಡಿದವರು, ಹಣಕಾಸಿನ ಸಹಾಯ ನೀಡಿದವರು, ಸಂಚು ರೂಪಿಸಲು ಭಾಗಿಯಾದವರು ತಲೆಮರೆಸಿಕೊಳ್ಳಲು ಆಶ್ರಯ ನೀಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು. ಕಾಫಿ ಎಸ್ಟೇಟ್, ಫಾರಂಗಳ, ಅಡಿಕೆ ಗೋದಾಮುಗಳ ಮಾಹಿತಿಯನ್ನು ಕಲೆಹಾಕಿ ರಾತ್ರಿ ಹೊತ್ತು ದಾಳಿ ನಡೆಸಿ ದರೋಡೆ ಕೃತ್ಯಗಳನ್ನು ನಡೆಸುತ್ತಿದ್ದ ಈ ತಂಡಗಳಿಗೆ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳ ಸಂಚಾರ ವಿರಳವಾಗಿದ್ದ ಕಾರಣ, ಚೆಕ್‌ಪಾಯಿಂಟ್‌ಗಳು ಅಧಿಕವಾಗಿದ್ದ ಕಾರಣ ಮನೆಕಳ್ಳತನ ಕಷ್ಟವಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರು ಶೋಕಿ ಜೀವನದ ಜತೆಗೆ ಗಾಂಜಾ ವ್ಯಸನಿಗಳೂ ಆಗಿದ್ದು, ವಿವಿಧ ಜಿಲ್ಲೆಗಳಲ್ಲಿ ಈ ಆರೋಪಿಗಳು ಜೈಲು ವಾಸ ಹಾಗೂ ವಿವಿಧ ರೀತಿಯ ಕಾರ್ಯಾಚರಣೆಯ ವೇಳೆ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬಂದು ತಂಡಗಳ ರೂಪದಲ್ಲಿ ಈ ಕೃತ್ಯಗಳನ್ನು ಎಸಗುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ಮಹೇಶ್ ಕುಮಾರ್ ಉಪಸ್ಥಿತರಿದ್ದರು.