ವಿವಿಧ ಇಲಾಖೆ ಕಚೇರಿಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ವಹಿಸಿ: ದುರುಗೇಶ್

ಅರಕೇರಾದಲ್ಲಿ ತಾಲೂಕು ಮಟ್ಟದ ಕಚೇರಿಗಳ ಪ್ರಾರಂಭಿಸುವ ಕುರಿತು ನಡೆದ ಸಭೆಯಲ್ಲಿ ಎಡಿಸಿ ಸೂಚನೆ
ರಾಯಚೂರು.ಜು.೨೨- ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮವನ್ನು ನೂತನ ತಾಲೂಕು ಕೇಂದ್ರವಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಅಂತಿಮ ಅಧಿಸೂಚನೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಅರಕೇರಾದಲ್ಲಿ ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಕಚೇರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರಿಗೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜು.೨೧ರ ಗುರುವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹೊಸದಾಗಿ ರಚನೆಯಾದ ಅರಕೇರಾ ತಾಲೂಕಿನಲ್ಲಿ ತಾಲೂಕು ಕಚೇರಿಗಳ ಪ್ರಾರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ನೂತನ ತಾಲೂಕು ಅರಕೇರದ ವ್ಯಾಪ್ತಿಗೆ ಒಟ್ಟು ೯೨ಕಂದಾಯ ಗ್ರಾಮಗಳು ಸೇರ್ಪಡೆಗೊಂಡಿದ್ದು, ೨೦೧೧ರ ಸಾಲಿನ ಜನಗಣತಿ ಪ್ರಕಾರ ಒಟ್ಟು ೩೦,೮೫೪ ಜನಸಂಖ್ಯೆ ಹೊಂದಲಾಗಿದೆ. ಅಲ್ಲಿಯ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬೇಕಾಗುವ ಸರ್ಕಾರಿ ಕಚೇರಿಗಳನ್ನು ಸ್ಥಾಪನೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಹೇಳಿದರು.
ಅರಕೇರಾ ತಾಲೂಕು ಕಚೇರಿಗೆ ಅಗತ್ಯವಿರುವ ಹುದ್ದೆಗಳ ಸಂಖ್ಯೆ ಹಾಗೂ ವೇತನಶ್ರೇಣಿ ಹಾಗೂ ಈ ಹುದ್ದೆಗಳಿಗೆ ವಾರ್ಷಿಕವಾಗಿ ತಗಲುವ ವೆಚ್ಚವನ್ನು ವಿವಿಧ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಹೇಳಿದರು.
ಕಂದಾಯ ಇಲಾಖೆಯ ಹುದ್ದೆಗಳು: ತಹಸೀಲ್ದಾರ್ ಗ್ರೇಡ್-೧, ತಹಶೀಲ್ದಾರ್ ಗ್ರೇಡ್೨-೧, ಶಿರಸ್ತೇದಾರ-೩, ಆಹಾರ ನಿರೀಕ್ಷಕರು-೧, ರಾಜಸ್ವ ನಿರೀಕ್ಷಕರು-೧, ಪ್ರಥಮ ದರ್ಜೆ ಸಹಾಯಕರು-೩, ದ್ವಿತೀಯ ದರ್ಜೆ ಸಹಾಯಕರು-೩, ಬೆರಳಚ್ಚುಗಾರ-೧, ಗ್ರಾಮಲೆಕ್ಕಿಗರು- ೫, ಭೂಮಿ ಆಪರೇಟರ್-೨, ವಾಹನ ಚಾಲಕರು-೧, ಧೃಪ್ತರ್ ಬಂದ-೧, ದಫೇದಾರ್-೧, ಡಿ ದರ್ಜೆ ನೌಕರರು-೨, ಆರ್.ಆರ್.ಅಟೆಂಡರ್-೧ ಹಾಗೂ ತಾಲೂಕು ಪಂಚಾಯತ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಶಿಕ್ಷಣ ಇಲಾಖೆಗಳನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ದೇವಿಕಾ ಆರ್., ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶರಣಬಸವ ಶೆಟ್ಟಿ, ಆಯುಷ್ ಇಲಾಖೆ ಅಧಿಕಾರಿ ಶಂಕರಗೌಡ ಪಾಟೀಲ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಖ ಇಲಾಕೆಯ ಆಹಾರ ನಿರೀಕ್ಷಕ ವೆಂಕಟೇಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಹನುಮಂತಪ್ಪ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.