
ಬೀದರ, ಏ. 02:ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಚುನಾವಣಾ ಕರ್ತವ್ಯವನ್ನು ಜವಬ್ದಾರಿಯಿಂದ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪರಸ್ಪರ ಮಾಹಿತಿ ವಿನಿಮಯ ಮಾಡುವ ಮೂಲಕ ಚುನಾವಣೆ ಕರ್ತವ್ಯವನ್ನು ಜವಬ್ದಾರಿಯಿಂದ ನಿರ್ವಹಿಸುವ ಕುರಿತು ಕರೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ವೀಕ್ಷಕರು ಬಂದಾಗ ಎಲ್ಲಾ ಮಾಹಿತಿಯನ್ನು ನಾವು ನೀಡಬೇಕಾಗುತ್ತದೆ. ಇದು ಚುನಾವಣಾ ಕರ್ತವ್ಯವಾಗಿರುವುದರಿಂದ ಎಲ್ಲಾ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಅಬಕಾರಿ ಇಲಾಖೆ ಅವರು ಎಲ್ಲಾ ಮಧ್ಯದ ಅಂಗಡಿಗಳ ಮಾಹಿತಿ ಇರಬೇಕು. ಎಲ್ಲೂ ಲೂಸ್ ಮಾರಾಟ ನಡೆಯದಂತೆ ನೊಡಿಕೊಳ್ಳಬೇಕು. ವಿಶೇಷವಾಗಿ ಕಿರಣಾ ಅಂಗಡಿ ಮತ್ತು ಹೈವೇ ಧಾಬಾಗಳಲ್ಲಿ ಮದ್ಯ ಮಾರಾಟ ನಡೆಯದಂತೆ ನೋಡಿಕೊಳ್ಳಬೇಕು. ತಮ್ಮ ವ್ಯಾಪ್ತಿಯ ಆರ್.ಓ.ಗಳಿಗೆ ಅಬಕಾರಿ ಇನ್ಸಪೆಕ್ಟರ್‍ಗಳು ಭೇಟಿಯಾಗಬೇಕು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು 24/7 ಕರ್ತವ್ಯ ನಿರ್ವಹಿಸಬೇಕು. ಬೀದರ ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಕುಕ್ಕರ್, ಗಡಿಯಾರ, ಸೀರೆ ಸೇರಿದಂತೆ ಇನ್ನಿತರ ಉಡುಗೂರೆಗಳನ್ನು ಯಾರೂ ವಿತರಿಸದಂತೆ ನೋಡಿಕೊಳ್ಳಬೇಕು. ಚೆಕ್‍ಪೋಸ್ಟ್‍ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕರೆ ಇನ್‍ಕಮ್ ಟ್ಯಾಕ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತ್ತು ಹೆಚ್ಚು ವಾಹನಗಳು ಸಂಚರಿಸುವ ಚೆಕ್‍ಪೋಸ್ಟ್‍ಗಳಲ್ಲಿ ಕಮರ್ಶಿಯಲ್ ಟ್ಯಾಕ್ಸ್ ಅಧಿಕಾರಿಗಳು ತಮ್ಮ ಹೆಚ್ಚಿನ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ ಅಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ತಮಗೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಲಾಗುವುದು. ಚುನಾವಣಾ ಕರ್ತವ್ಯವನ್ನು ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು. ಮತ್ತು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇರುವ ಗೊದಾಮ್‍ಗಳ ಸ್ಟಾಕ್‍ಗಳನ್ನು ಚೆಕ್ ಮಾಡಿ ಯಾವ ಗೊದಾಮ್‍ಗಳಲ್ಲಿ ಸೀರೆ, ಬಟ್ಟೆ ಮತ್ತು ಇತರೆ ವಸ್ತುಗಳ ಸ್ಟಾಕ್ ಮತ್ತು ಅವುಗಳ ರಸೀದಿ ದಾಖಲಾತಿಗಳನ್ನು ಪರಿಶೀಲಿಸಬೇಕು. ಹಾಗೂ ಮಧ್ಯ ಮರಾಟ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ತಮಗೆ ಬೇಕಾದರೆ ಪೊಲೀಸ್ ಇಲಾಖೆಯ ಸಹಾಯವನ್ನು ನೀಡಲಾಗುವುದು. ಎಲ್ಲರೂ ಸೇರಿ ಪರಸ್ಪರ ಸಹಾಕಾರದಿಂದ ಕೆಲಸ ಮಾಡಿದರೇ ಮಾತ್ರ ತಮಗೂ ಮತ್ತು ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಬಸವಕಲ್ಯಾಣದ ಸಹಾಯಕ ಆಯುಕ್ತರಾದ ರಮೇಶ ಕೊಲಾರ, ಆಹಾರ ಮತ್ತು ನಾಗರಿಕ ಸರಾಬರಾಜು ಇಲಾಖೆಯ ಉಪ ನಿರ್ದೇಶಕರಾದ ಸುರೇಖಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.