ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ

ತುಮಕೂರು, ಮಾ. ೫- ನಗರದಲ್ಲಿ ಕಳೆದ ೫ ವರ್ಷಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ೬೦೦ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆ ಮಾಡಿದರು.
ರಂಭಾಪುರಿ ಸುಕ್ಷೇತ್ರ ಬಾಳೆಹೊನ್ನೂರಿನಲ್ಲಿ ನಡೆದ ಶ್ರೀ ರೇಣುಕಾಚಾರ್ಯರ ಜಯಂತಿಯಲ್ಲಿ ಪಾಲ್ಗೊಂಡ ನಂತರ ಹೆಲಿಕಾಪ್ಟರ್‌ನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿಗಳು ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿ.ಪಂ. ಸಿಇಓ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಅವರು ಪುಷ್ಪುಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.
ನಂತರ ಮುಖ್ಯಮಂತ್ರಿಗಳು ಕಾರಿನಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ತೆರಳಿ ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಕಾರ್ಯಕ್ರಮದ ವೇದಿಕೆಯಲ್ಲೆ ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಳ್ಳಲಾಗಿರುವ ಸುಮಾರು ೬೦ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಕ್ರೀಡಾಂಗಣ, ೮ ಪ್ರೇಕ್ಷಕರ ಗ್ಯಾಲರಿ, ವಿವಿಐಪಿ ಗ್ಯಾಲರಿ, ೪೦ ಕಾರು ಮತ್ತು ಬೈಕ್‌ಗಳ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ, ಕ್ರೀಡಾಪಟುಗಳು ಮತ್ತು ವಿಐಪಿಗಳಾಗಿ ವಸತಿ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸುವ ಮೂಲಕ ನವೀಕೃತ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಅಧಿಕೃತವಾಗಿ ಕ್ರೀಡಾಪಟುಗಳ ಬಳಕೆಗೆ ಅವಕಾಶ ಮಾಡಿಕೊಟ್ಟರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಮಾರು ೫೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಅಪಘಾತ ಚಿಕಿತ್ಸಾ ಕೇಂದ್ರ, ನಗರ ಕೇಂದ್ರ ಗ್ರಂಥಾಲಯ, ಹೊರವರ್ತುಲ ರಸ್ತೆ, ಸ್ಮಾರ್ಟ್ ರಸ್ತೆ ಹಾಗೂ ಇತರೆ ರಸ್ತೆಗಳು, ಅಮಾನಿಕೆರೆಯ ಕೆರೆಯಲ್ಲಿ ೪೫.೭೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೈಕಲಿಂಗ್ ಪಥಗಳು, ಕೆರೆದಂಡೆಯ ಹಿಂಭಾಗದ ಇಳಿಜಾರಿಗೆ ಹುಲ್ಲುಹಾಸು, ಬೀದಿದೀಪಗಳು, ಎಸ್ಪಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಐಸಿಎಂಸಿಸಿ ಕಟ್ಟಡ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೈಗೊಳ್ಳಲಾಗಿರುವ ಹೆಚ್ಚುವರಿ ತರಗತಿ ಕೊಠಡಿಗಳು, ಡಿಜಿಟಲ್ ಕ್ಲಾಸ್‌ರೂಂಗಳು, ಪೀಠೋಪಕರಣಗಳು, ಶೌಚಾಲಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಫಲಾನುಭವಿಗಳ ಸಮ್ಮೇಳನಕ್ಕೆ ಚಾಲನೆ
ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಫಲಾನುಭವಿಗಳ ಸಮ್ಮೇಳನಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿಗಳು ಜಿಲ್ಲೆಯ ೧೦ ತಾಲ್ಲೂಕುಗಳಿಂದಲೂ ಆಗಮಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ಬಡವರು, ಹಿಂದುಳಿದವರು, ದೀನ ದಲಿತರ, ಅಲ್ಪಸಂಖ್ಯಾತರಿ, ವಿದ್ಯಾರ್ಥಿಗಳು, ರೈತರು ಸೇರಿದಂತೆ ಎಲ್ಲ ವರ್ಗದವರ ಏಳ್ಗೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಗತಿಗೂ ಒತ್ತು ನೀಡಲಾಗಿದೆ. ಡಬಲ್ ಎಂಜಿನ್ ಸರ್ಕಾರಗಳು ಸದಾ ಜನಪರ ಚಿಂತನೆ ನಡೆಸುತ್ತಾ ಎಲ್ಲ ವರ್ಗದ ಪ್ರಗತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೂರ್ಯರೂಪಕ್ಕೆ ತರಲಾಗಿದೆ ಎಂದರು.
ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಇದೇ ಸಂದರ್ಭದಲ್ಲಿ ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಜಿಲ್ಲಾ ತೋಟಗಾರಿಕೆ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಏರ್ಪಡಿಸಲಾಗಿರುವ ಫಲಫುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.
ಮೌಲಾನಾ ಆಜಾದ್ ಭವನ ಉದ್ಘಾಟನೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಭವನ ಮತ್ತು ಉಪ್ಪಾರಹಳ್ಳಿ ಸಾಮಾನ್ಯ ಸೇವಾ ಕೇಂದ್ರ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಯ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಗುಂಚಿಚೌಕ, ನೂತನ ಕಟ್ಟಡಗಳ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು.
ಸಮಾರಂಭದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, ಜೆ.ಸಿ. ಮಾಧುಸ್ವಾಮಿ, ಬೈರತಿ ಬಸವರಾಜು, ಮುನಿರತ್ನ, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಮಸಾಲ ಜಯರಾಮ್, ಡಾ. ರಾಜೇಶ್‌ಗೌಡ, ವೈ.ಎ. ನಾರಾಯಣಸ್ವಾಮಿ, ಚಿದಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು.