ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಧುಗಿರಿ, ಆ. ೫- ವರುಣನ ಕೃಪೆಯಿಂದ ಈ ಬಾರಿ ಹೆಚ್ಚಿನ ಮಳೆಯಾಗುತ್ತಿದ್ದು ಈ ಭಾಗದಲ್ಲಿ ನೀರಿನ ಬವಣೆ ಕಡಿಮೆಯಾಗಿ ರೈತರ ಬದುಕು ಹಸನಾಗಲಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿ ಬೋರಾಗುಂಟೆ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ, ಸಮುದಾಯ ಭವನ, ಎತ್ತಿನ ಹೊಳೆ ಯೋಜನೆಯಡಿ ಸಿಸಿ ರಸ್ತೆ ಸೇರಿದಂತೆ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಅನೇಕ ಕೆರೆಗಳು ಕೋಡಿ ಬಿದ್ದಿವೆ. ಭಗವಂತನ ದಯೆಯಿಂದ ಪ್ರತೀ ವರ್ಷವೂ ಇದೇ ರೀತಿ ಮಳೆಯಾದರೆ ರೈತಾಪಿ ಜನರಿಗೆ, ಕುಡಿಯುವ ನೀರಿಗೆ ತೊಂದೆಯಾಗುವುದಿಲ್ಲ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಾಲ್ಲೂಕು ಆಡಳಿತದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದರು.
ಜಯಮಂಗಲಿ ನದಿ ಮೈದುಂಬಿ ಹರಿಯುತ್ತಿದ್ದು ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ನೀರಿಗೆ ಇಳಿಯದಂತೆ ಎಚ್ಚರ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಎಸ್ಸಿ ಟಿಎಸ್ಪಿ ಅಡಿಯಲ್ಲಿ ಕೂನ್ನಹಳ್ಳಿ, ಬಡಿಗೊಂಡನಹಳ್ಳಿ, ದಬ್ಬೇಗಟ್ಟ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಡಿಯಲ್ಲಿ ಬೋರಾಗುಂಟೆ ಗ್ರಾಮದಲ್ಲಿ ೧೨ ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಂಗಾಪುರ ಗ್ರಾ.ಪಂ. ಉಪಾಧ್ಯಕ್ಷ ನಾಗೇಶ್, ಸದಸ್ಯ ಪ್ರಶಾಂತ್, ಮುಖಂಡರಾದ ನಿವೃತ್ತ ಪ್ರಾಂಶುಪಾಲ ಮರುಳಯ್ಯ, ಬಾವಿಮನೆ ಕಾಂತಣ್ಣ, ವಿಶ್ವನಾಥ್, ಶ್ರೀಕುಮಾರ್, ಬಾವಿಮನೆ ರಂಗನಾಥ್, ರಘು, ಚೇತನ್‌ಕುಮಾರ್, ಕಾಮರಾಜು, ಗಬಾಲಿರಾಜು, ರಾಕೇಶ್, ಎತ್ತಿನಹೊಳೆ ವಿಭಾಗದ ವಿಜಯಪ್ರಸಾದ್, ಪಿಡಿಒ ಜುಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.