ವಿವಿಧ ಅಧ್ವಾನಗಳನ್ನು ಕೂಡಲೇ ಸರಿಪಡಿಸುವಂತೆ ಜಯಕರ್ನಾಟಕ ಸಂಘಟನೆ ಒತ್ತಾಯ

ಗುರುಮಠಕಲ್:ಆ.10:ಶೈಕ್ಷಣಿಕ ರಂಗದಲ್ಲಿನ ಮೂಲಸೌಕರ್ಯಗಳ ಹಾಗೂ ಶಿಕ್ಷಕರ ಕೊರತೆ, ಶಿಥಿಲಗೊಂಡ ಶಾಲಾ ಕಟ್ಟಡಗಳ ಸರ್ವೇ ಮಾಡಿ ಹೊಸ ಕಟ್ಟಡ ನಿರ್ಮಾಣ, ಶಿಕ್ಷಕರ ವರ್ಗಾವಣೆ ಸೇರಿದಂತೆ ವಿವಿಧ ಅಧ್ವಾನಗಳನ್ನು ಕೂಡಲೇ ಸರಿಪಡಿಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ.
ಕಲ್ಯಾಣ ಕರ್ನಾಟಕ ಭಾಗದ ಅತಿ ಹಿಂದುಳಿದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಲ್ಲಿನ ಶೈಕ್ಷಣಿಕ ರಂಗದಲ್ಲಿನ ಮೂಲಸೌಕರ್ಯಗಳ ಸಮಸ್ಯೆಗಳು ಅಪಾರವಾಗಿವೆ. ಇವುಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಪದಾಧಿಕಾರಿಗಳು ಮಾನ್ಯ ತಹಸೀಲ್ದಾರರು ಗುರುಮಠಕಲ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ತಾಲೂಕ ಅಧ್ಯಕ್ಷರಾದ ನಾಗೇಶ್ ಗದ್ದಿಗಿ ರವರು ಮಾತನಾಡಿ ನಮ್ಮ ತಾಲೂಕಿನ ಶಾಲೆಗಳಲ್ಲಿ ಒಂದಿದ್ದರೆ ಒಂದಿಲ್ಲದಂತೆ ಸಮಸ್ಯೆಗಳ ಸುಳಿಯಲ್ಲಿ ಶಾಲೆಗಳು ಸಿಲುಕಿಕೊಂಡಿವೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ.
ಶಿಕ್ಷಕರ ಕೊರತೆಯಷ್ಟೇ ಅಲ್ಲದೇ ಮೂಲಸೌಕರ್ಯಗಳ ಕೊರತೆಯಿಂದಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದರಲ್ಲಿ ಶಿಥಿಲಗೊಂಡ ಶಾಲಾ ಕಟ್ಟಡಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ.
ಇತ್ತಿಚೆಗೆ ಅಂದರೆ ಕೊರೊನೊತ್ತರ ಕಾಲದಲ್ಲಿ ಮಳೆಗಾಲದಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು ನಮ್ಮ ಭಾಗವು ಸಹ ಮಲೆನಾಡಿನಂತಾಗಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ. ಈ ಮೊದಲು ಬರಿ ಬಿಸಿಲು ಇರುತ್ತಿತ್ತು ಇದರಿಂದ ಶಾಲಾ ಕಟ್ಟಡಗಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಇದೀಗ ಮಳೆ ವಿಪರೀತವಾಗಿ ಆಗುತ್ತಿರುವುದರಿಂದ ಕಟ್ಟಡಗಳು ಸೋರುತ್ತಿವೆ.
ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಬದಲಾಗಿ ಕೆಸರು ಗದ್ದೆಗಳಾಗಿದ್ದು, ಮಕ್ಕಳು ಮಳೆಯಲ್ಲಿ ಕೆಸರಿನಲ್ಲಿ ಹರಸಾಹಸ ಮಾಡಿ ಶಾಲೆಗೆ ಹೋಗುತ್ತಾರೆ ಅಲ್ಲಿ ಶಾಲೆ ಕೋಣೆಗಳು ಸೋರುತ್ತಿದ್ದು ಇನ್ನು ಅನೇಕ ಶಾಲೆಗಳಲ್ಲಿ ಮೇಲ್ಚಾವಣಿ ಕುಸಿಯುವ ಹಂತಕ್ಕೆ ತಲುಪಿವೆ.
ಆದ್ದರಿಂದ ಇಂತಹ ಶಾಲೆಗಳ ಸಮಗ್ರ ಸರ್ವೇ ಮಾಡಿಸಿ ಅಗತ್ಯ ಮತ್ತು ಅನುಕೂಲತೆಯನ್ನು ನೋಡಿಕೊಂಡು ದುರಸ್ತಿ ಮಾಡಬೇಕು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಕಟ್ಟಡಗಳ ಕೋಣೆಗಳ ನಿರ್ಮಾಣ ಮಾಡಬೇಕು. ಎಂದು ಸಂಘಟನೆ ಒತ್ತಾಯಿಸುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿದಿದ್ದು. ಇಂತಹ ಸಂದರ್ಭದಲ್ಲಿ ನಮ್ಮಲ್ಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡುವುದರಿಂದ ಗ್ರಾಮೀಣ ಪ್ರದೇಶದ ಶಾಲೆಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಲಿದೆ, ಜಿಲ್ಲೆಯ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಿದೆ. ಇದು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಸಂಪೂರ್ಣ ಹಳಿ ತಪ್ಪಿಸುವ ಆತಂಕ ಕಾಡುತ್ತಿದ್ದು ಹೊಸ ಶಿಕ್ಷಕರು ಬರುವ ವರೆಗೆ ಯಾವುದೇ ಕಾರಣಕ್ಕೂ ಈಗಿರುವ ಶಿಕ್ಷಕರನ್ನು ಇಲ್ಲಿಂದ ಬೇರೆಡೆ ಕಳಿಸಬಾರದು.
ಇನ್ನು ಶಿಕ್ಷಕರನ್ನು ಬೇಸಿಗೆ ಕಾಲದಲ್ಲಿ ವರ್ಗಾವಣೆ ಮಾಡಬೇಕು ಆದರೆ ಬೇಸಿಗೆ ಕಾಲದಲ್ಲಿ ಚುನಾವಣೆ ನಡೆದು ಶಾಲೆ ಆರಂಭವಾದ ಮೇಲೆ ಅಸ್ತಿತ್ವಕ್ಕೆ ಬಂದ ಸರ್ಕಾರ ಈದೀಗ ವರ್ಗಾವಣೆ ಧಂದೆಗೆ ಮುಂದಾಗಿರುವುದು ಸರಿಯಲ್ಲ. ಅಕಾಲಿಕ ವರ್ಗಾವಣೆ ಧಂದೆ ನಡೆಯುತ್ತಿರುವುದರಿಂದ ಶಾಲೆಗಳಲ್ಲಿ ಮೊದಲೇ ಶಿಕ್ಷಕರು ಇಲ್ಲದ ವೇಳೆಯಲ್ಲಿ ಅಕಾಲಿಕ ಹಾಗೂ ಮನಬಂದಂತೆ ವರ್ಗಾವಣೆ ಮಾಡುವುದರಿಂದ ಶಿಕ್ಷಕರು ವರ್ಗಾವಣೆಗೊಂಡು ಹೋಗಿ ಅಲ್ಲಿ ಹೊಂದಿಕೊಳ್ಳಲು ಕನಿಷ್ಟ ಎರಡು ತಿಂಗಳುಗಟ್ಟಲೆ ಬೇಕಾಗುತ್ತದೆ ಇದರಿಂದ ಈ ಎರಡು ತಿಂಗಳ ಕಾಲ ಮಕ್ಕಳ ವಿದ್ಯಾಭ್ಯಾಸದ ಮೇಲೆ ಭಾರಿ ಪರಿಣಾಮ ಬೀರಲಿದೆ.
ಆದ್ದರಿಂದ ವರ್ಗಾವಣೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇಲ್ಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದನ್ನು ತಕ್ಷಣ ಕೈಬಿಡಬೇಕು ಮತ್ತು ಅಗತ್ಯವಿರುವ ಶಿಕ್ಷಕರನ್ನು ನಿಯೋಜನೆ ಮಾಡಬೇಕು.
ಹೀಗೆ ಶೈಕ್ಷಣಿಕವಾಗಿ ಸಮಸ್ಯೆ ಎದುರಿಸುತ್ತಿರುವ ಈ ಭಾಗದಲ್ಲಿ ಶೈಕ್ಷಣಿಕ ರಂಗದ ಈ ಸಮಸ್ಯೆಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ವಿವಿಧ ಅಧ್ವಾನಗಳನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಕಾಕಲವಾರ. ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಮೇದಾ,ಉಪಾಧ್ಯಕ್ಷ ಕಾಶಪ್ಪ ದೊರೆ, ಕಾರ್ಯಾಧ್ಯಕ್ಷ ನರಸಿಮುಲು ಗಂಗನೊಳ್, ಮಹೇಶ್ ಎಸ್.ಪಿ, ರಾಜು ಪುರುಷೋತ್ತಮ್, ಉದಯ್ ಕೊಂಕಲ್, ನಿಖಿಲ್ ಡಗೆ, ರಿಯಾಜ್ ಅಹ್ಮದ್, ಆಯಾಜ್ ಅಲಿ,ಸಾಬಣ್ಣ ಅಲೇಮನಿ, ಭಿಮು ಬುದುರ್, ಜಗಪ್ಪ ನಕ್ಕ, ಅಂಜಿ ಮಂಗಮೊಳ್, ವೆಂಕಟೇಶ ದಾಸರಿ, ನರಸಿಂಹ ಮಡಿವಾಳ ,ಭೀಮು ಎಮ್.ಟಿ.ಪಲ್ಲಿ, ಗೌರೀಶ್, ವೆಂಕಟೇಶ್,ಜಗದೀಶ್, ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಹಾಗೂ ಸಂಘಟನೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.