ವಿವಿಧೆಡೆ ಸಂಭ್ರಮದ ಶಿವರಾತ್ರಿ ಆಚರಣೆ

ಕೆಂಭಾವಿ:ಫೆ.19:ಪಟ್ಟಣದ ಇತಿಹಾಸ ಪ್ರಸಿದ್ಧ ಭೋಗೇಶ್ವರನ ದೇವಸ್ಥಾನದಲ್ಲಿ ಮಂಗಳವಾರ ಶಿವರಾತ್ರಿ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆಯಿಂದ ಭಕ್ತರು ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ರಾಜಶೇಖರಯ್ಯ ಹಿರೇಮಠ, ಆದಿದೇವ ಶಿವನನ್ನು ನೆನೆಯುವದರಿಂದ ಅನೇಕ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ. ಮನೆಯಲ್ಲಿ ದಿನಾಲೂ ಇಷ್ಟಲಿಂಗ ಪೂಜೆಯನ್ನು ಮಾಡುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ತಿಳಿಸಿದರು.

ಪ್ರಮುಖರಾದ ಸಂಗಣ್ಣ ತುಂಬಗಿ, ಮೋಹನರೆಡ್ಡಿ ಡಿಗ್ಗಾವಿ, ಮಲ್ಲಿಕಾರ್ಜುನ ಬಿದರಿ, ಪುರಸಭೆ ಸದಸ್ಯ ಶರಣಪ್ಪ ಯಾಳಗಿ, ಗುರು ಕುಂಬಾರ, ಮಲ್ಲು ಅಂಗಡಿ, ಮಲ್ಲು ಕುಂಬಾರ, ರಮೇಶ ಟಕ್ಕಳಕಿ, ದೇವು ಹಡಪದ, ಶರಣು ಖಾನಾಪುರ, ಮಹಾಂತೇಶ, ತಿಪ್ಪಣ್ಣ, ವಿಶ್ವ ಅವರ ನೇತೃತ್ವದಲ್ಲಿ ಶಿವಲಿಂಗಕ್ಕೆ ಸಹಸ್ರ ಬಿಲ್ವಾರ್ಚನೆ, ಅಭಿಷೇಕ, ರುದ್ರ ಪಾರಾಯಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದಲ್ಲದೆ ಪಟ್ಟಣದ ಶ್ರೀ ರೇವಣಸಿದ್ದಪ್ಪ ಗುಡಿ, ಶ್ರೀ ಕೇದಾರಲಿಂಗನ ಕಟ್ಟಿ, ಶರಣಬಸವೇಶ್ವರ ದೇವಸ್ಥಾನ, ಸಂಜೀವನಗರದ ಸಂಜೀವಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನಡೆದವು.

ಅಯ್ಯಪ್ಪ ಸನ್ನಿಧಾನ : ಪಟ್ಟಣದ ಉಮಾಕಾಂತ ಬಂದೆ ಬಡಾವಣೆಯಲ್ಲಿರುವ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಪ್ರಸಾದ ಸ್ವಾಮಿ, ಮಲ್ಕಪ್ಪ ಅಂಗಡಿ ಹಾಗೂ ರಾಜು ಮಾಲಗತ್ತಿ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸುತ್ತಮುತ್ತಲಿನ ಭಕ್ತರು ಸೇರಿದಂತೆ ಅನೇಕರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.