ವಿವಿಧೆಡೆ ಅಬಕಾರಿ ದಾಳಿ ನಡೆಸಿ 75,000 ರೂ. ಮೌಲ್ಯದ ಸ್ವದೇಶಿ ಮದ್ಯ ಬಿಯರ್ ಹಾಗೂ 2 ದ್ವಿಚಕ್ರ ವಾಹನಗಳು ಜಪ್ತಿ

ಕಲಬುರಗಿ,ಮೇ.26:ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಸನ್ನದು ಮದ್ಯ ವಹಿವಾಟು ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವವರನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ವಿವಿಧೆಡೆ ಮಿಂಚಿನ ಅಬಕಾರಿ ದಾಳಿ ನಡೆಸಿ ಸ್ವದೇಶಿ ಮದ್ಯ ಬಿಯರ್ ಹಾಗೂ 2 ದ್ವಿ ಚಕ್ರ ವಾಹನಗಳು ಜಪ್ತಿಪಡಿಸಲಾಗಿದೆ. ಈ ಜಪ್ತಿ ಮಾಡಿದ ಮುದ್ದೇಮಾಲಿನ ಅಂದಾಜು ಒಟ್ಟು ಮೌಲ್ಯ 75,000 ರೂ. ಇರುತ್ತದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರು ತಿಳಿಸಿದ್ದಾರೆ.
ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಡಿ.ಸಿ.ಇ.ಐ.ಬಿ ಕಲಬುರಗಿ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಗಳೊಂದಿಗೆ 2021ರ ಮೇ 26 ರಂದು ಅಫಜಲಪೂರ ಪಟ್ಟಣದ ಹೊರಗಡೆ ರಸ್ತೆಕಾವಲು ಮಾಡುತ್ತಿರುವಾಗ ಅಕ್ರಮವಾಗಿ ಮದ್ಯ ಸಾಗಾಣಿಕೆಗೆ ಬಳಸಿದ ಒಂದು ದ್ವಿಚಕ್ರ ವಾಹನ (ಹಿರೋ ಹೊಂಡಾ ಪ್ಯಾಷನ್ ಪ್ಲಸ್) ಹಾಗೂ 180 ಎಂ.ಎಲ್. ಪ್ರಮಾಣದ 48 ಟೆಟ್ರಾ ಪ್ಯಾಕೇಟುಗಳು ಓರಿಜನಲ್ ಚೊಯಿಸ್ ವಿಸ್ಕಿ ಮತ್ತು 650 ಎಂ.ಎಲ್. ಪ್ರಮಾಣದ 12 ಬಾಟಲುಗಳು ಬ್ರಿಕ್ಸ್ ಹೆಸರಿನ ಬೀರ ಜಪ್ತಿಪಡಿಸಿ ಕಲಬುರಗಿ ಡಿ.ಸಿ.ಇ.ಐ.ಬಿ. ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ಅವರು ಘೋರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮದ ಹತ್ತಿರ ಗಸ್ತು ಮಾಡುತ್ತಿರುವಾಗ ಅಕ್ರಮವಾಗಿ 180 ಎಂ.ಎಲ್. ಪ್ರಮಾಣದ 48 ಟೆಟ್ರಾ ಪ್ಯಾಕೇಟುಗಳು ಓರಿಜನಲ್ ಚೊಯಿಸ ವಿಸ್ಕಿ ಮದ್ಯವನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವ ಹೀರೊ ಸ್ಪಲೆಂಡರ ಪ್ಲಸ್ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡು ಕಲಬುರಗಿ ಡಿ.ಸಿ.ಇ.ಐ.ಬಿ. ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ಅವರ ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಅಬಕಾರಿ ದಾಳಿ ಗಸ್ತು ಕಾರ್ಯಾಚರಣೆಯಲ್ಲಿ ಅಬಕಾರಿ ಕಾನ್ಸ್‍ಸ್ಟೇಬಲ್ ಶಿವಪ್ಪಗೌಡ ಮತ್ತು ವಾಹನ ಚಾಲಕ ಆನಂದ ಪಾಲ್ಗೊಂಡಿದ್ದರು.
ಕಲಬುರಗಿ ವಿಭಾಗ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ, ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಈ ವಿವಿಧೆಡೆ ಮಿಂಚಿನ ಅಬಕಾರಿ ದಾಳಿ ನಡೆಸಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.