ವಿವಿಧೆಡೆ ಅಬಕಾರಿ ದಾಳಿ ನಡೆಸಿ 4 ಲಕ್ಷ ರೂ. ಮೌಲ್ಯದ ಸ್ವದೇಶಿ ಮದ್ಯ ಹಾಗೂ ವಾಹನಗಳು ಜಪ್ತಿ

ಕಲಬುರಗಿ,ಮೇ.28:ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಸನ್ನದು ಮದ್ಯ ವಹಿವಾಟು ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುವುದನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಮೇ 27 ಹಾಗೂ 28 ರಂದು ವಿವಿಧೆಡೆ ಮಿಂಚಿನ ಅಬಕಾರಿ ದಾಳಿ ನಡೆಸಿ ಸ್ವದೇಶಿ ಮದ್ಯ ಹಾಗೂ ತಲಾ ಒಂದು ಮಹೇಂದ್ರ ಸುಪ್ರೊ 4 ಚಕ್ರದ ವಾಹನ ಹಾಗೂ ಹೊಂಡಾ ಎಕ್ಟೀವಾ ದ್ವಿ ಚಕ್ರ ವಾಹನವನ್ನು ಜಪ್ತಿಪಡಿಸಲಾಗಿದೆ ಈ ಜಪ್ತಿ ಮಾಡಿದ ಮುದ್ದೇಮಾಲಿನ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ 4,00,000 ರೂ. ಇರುತ್ತದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳಂದ ವಲಯ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಗುರುವಾರ ಮೇ 27 ರಂದು ಮಧ್ಯಾಹ್ನ ಸಿಕ್ಕಿದ ಮಾಹಿತಿ ಮೇರೆಗೆ ಅಫಜಲಪೂರ ತಾಲೂಕಿನ ಗುಡ್ಡೆವಾಡಿ ಗ್ರಾಮದ ನಿಂಗಪ್ಪ ತಂದೆ ಗುರುಶಾಂತಪ್ಪ ಹೂಗಾರ ಇವರ ಮನೆಯ ಮೇಲೆ ಅಬಕಾರಿ ದಾಳಿ ಮಾಡಿ 180 ಎಂ.ಎಲ್ ಪ್ರಮಾಣದ 192 ಟೆಟ್ರಾ ಪ್ಯಾಕುಗಳು ಓರಿಜನಲ್ ಚೊಯಿಸ ವಿಸ್ಕಿ ಜಪ್ತಿ ಮಾಡಿಕೊಂಡು ಆರೋಪಿ ವಿರುದ್ಧ ಘೋರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಲಬುರಗಿ ಅಬಕಾರಿ ಉಪವಿಭಾಗದ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಶುಕ್ರವಾರ ಮೇ 28 ರಂದು ಬೆಳಿಗ್ಗೆ ಗಸ್ತು ನಡೆಸುತ್ತಿದ್ದಾಗ ಜೇವರ್ಗಿದಿಂದ ನರಬೋಳ ಗ್ರಾಮಕ್ಕೆ ಹೋಗುವ ಚನ್ನೂರ ಗ್ರಾಮದ ಕ್ರಾಸ್ ಹತ್ತಿರ ಅನುಮಾನಾಸ್ಪದ ವಾಹನ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿರುತ್ತದೆ. ಇದಕ್ಕೆ ಬಳಸಿದ ನಾಲ್ಕು ಚಕ್ರದ ಮಹೇಂದ್ರ ಸುಪ್ರೊ ಎಲ್ ಎಕ್ಸ್ ಹಾಗೂ ವಾಹನದಲ್ಲಿರುವ 180 ಎಂ.ಎಲ್. ಪ್ರಮಾಣದ 960 ಟೆಟ್ರಾ ಪ್ಯಾಕೇಟುಗಳು, ಓರಿಜನಲ್ ಚೊಯಿಸ್ ವಿಸ್ಕಿ ಮದ್ಯವನ್ನು ಜೇವರ್ಗಿ ಅಬಕಾರಿ ಉಪ ನಿರೀಕ್ಷಕ ಸುದರ್ಶನ ಕುಮಾರ ಅವರು ಜಪ್ತಿ ಮಾಡಿಕೊಂಡು ಘೋರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಜಂಟಿ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳೊಂದಿಗೆ ಮೇ 28 ರಂದು ಮಧ್ಯಾಹ್ನ ಕಲಬುರಗಿಯಿಂದ ಮಹಾಗಾಂವಕ್ಕೆ ಹೋಗುವ ಕುರಿಕೋಟಿ ಬ್ರಿಡ್ಜ ಹತ್ತಿರ ಕುರಿಕೋಟಿ ಗ್ರಾಮದ ಹಣಮಂತರಾವ ತಂದೆ ಹೇಮಂತ ಇವರಿಗೆ ಸೇರಿದ ಹೈವೇ ದಾಬಾದ ಎದುರುಗಡೆ ವಾಹನ ಹೊಂಡಾ ಎಕ್ಟೀವಾ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 180 ಎಂ.ಎಲ್. ಪ್ರಮಾಣದ 19 ಬಾಟಲು ಟೆಟ್ರಾ ಪ್ಯಾಕುಗಳು ಹಾಗೂ 650 ಎಂ.ಎಲ್. ಪ್ರಮಾಣದ 12 ಕಿಂಗ್ ಫೀಶ್ ಸ್ಟ್ರಾಂಗ ಬಿಯರ್ ಬಾಟಲುಗಳನ್ನು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಮಾಡಿ ವಾಹನ ಹಾಗೂ ಮುದ್ದೆಮಾಲನ್ನು ಕಲಬುರಗಿ ವಿಭಾಗದ ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಧನರಾಜ್ ಅವರು ಜಪ್ತಿ ಮಾಡಿಕೊಂಡು ಅರೋಪಿಯ ವಿರುದ್ಧ ಘೋರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಈ ಅಬಕಾರಿ ದಾಳಿಗಳ ಸಂದರ್ಭದಲ್ಲಿ ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರಾದ ವನಿತಾ ಎಸ್. ಸೀತಾಳೆ, ಅಳಂದ ವಲಯದ ಶ್ರೀಶೈಲ ಅವಜಿ, ಪ್ರಿಯಾಂಕ, ಅಬಕಾರಿ ಮುಖ್ಯ ಪೇದೆಗಳಾದ ಪೀರಪ್ಪ, ಶ್ರೀಧರ, ಕಾನಸ್ಟೇಬಲರಾದ ಮಹಬೂಬ ಅಲಿ, ಶ್ರೀ ಗೊಲ್ಲಾಳಪ್ಪ, ಭೋಗಪ್ಪ, ರಾಮಕೃಷ್ಣ, ರಾಘವೇಂದ್ರ ಹಾಗೂ ವಾಹನ ಚಾಲಕ ಪಾಲ್ಗೊಂಡಿದ್ದರು.
ಕಲಬುರಗಿ ವಿಭಾಗ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ, ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಈ ವಿವಿಧೆಡೆ ಮಿಂಚಿನ ಅಬಕಾರಿ ದಾಳಿ ನಡೆಸಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.