ಯಳಂದೂರು 24:ತಾಲೂಕಿನಾದ್ಯಂತ ಭಾನುವಾರ ವಿವಿಧೆಡೆ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ತಾಲೂಕಿನ ಗೌಡಹಳ್ಳಿ, ಹೊನ್ನೂರು, ಕೆಸ್ತೂರು, ಅಂಬಳೆ ಸೇರಿದಂತೆ ವಿವಿಧೆಡೆ ಬಸವೇಶ್ವರ ಭಾವಚಿತ್ರವನ್ನಿಟ್ಟು ಪೂಜಿಸಿ, ಕೆಲವೆಡೆ ನೀರುಮಜ್ಜಿಗೆ, ಪಾನಕಗಳನ್ನು ವಿತರಿಸುವ ಮೂಲಕ ಭಕ್ತಿ ಮೆರೆಯಲಾಯಿತು.
ಪಟ್ಟಣದ ಎಸ್‍ಬಿಐ ವೃತ್ತದಲ್ಲಿರುವ ಬಸವೇಶ್ವರರ ಭಾವಚಿತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಕಿನಕಹಳ್ಳಿ ರಾಚಯ್ಯ ತಮ್ಮ ಅಪಾರ ಬೆಂಬಲಿಗರೊಡನೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ 800 ವರ್ಷಗಳ ಹಿಂದೆಯೇ ಶೋಷಿತರ, ಮಹಿಳೆಯರ, ಜಾತಿ, ವರ್ಣ ವಿರುದ್ಧ ಧ್ವನಿ ಎತ್ತಿ ಅದರ ವಿರುದ್ಧ ಹೋರಾಟ ಮಾಡಿ, ಅನುಭವ ಮಂಟಪ ಎಂಬ ಸಂಸತ್ ರಚನೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಬಸವಣ್ಣ ಇಂದಿಗೆ ಪ್ರಸ್ತುತರಾಗುತ್ತಾರೆ. ಇವರ ಚಿಂತನೆಗಳೇ ಕ್ರಾಂತಿಕಾರಿಯಾಗಿತ್ತು. ಇಡೀ ಸಮಾಜವನ್ನು ಸಮ ಸಮಾಜ ಮಾಡುವತ್ತ ಇದ್ದ ಇವರ ಕಾಳಜಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ವ್ಯಕ್ತಿ ನಮ್ಮ ರಾಜ್ಯದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯವಾಗಿದ್ದು ಇವರ ತತ್ವಾದರ್ಶಗಳ ಅನುಕರಣೆ ಮನಗೆ ಪ್ರಸ್ತುತವಾಗುತ್ತದೆ ಎಂದರು.
ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಪುಟ್ಟಸುಬ್ಬಪ್ಪ, ರವಿ, ಶಿವು, ಸೇರಿದಂತೆ ಅನೇಕರು ಹಾಜರಿದ್ದರು.