ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಭಾರತ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ನ 29: ಬಹುಭಾಷಾ ಶೈಕ್ಷಣಿಕ ವ್ಯವಸ್ಥೆ, ವಿವಿಧ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳು ಸೇರಿದಂತೆ ಹತ್ತು ಹಲವು ಸ್ಥರಗಳನ್ನು ಹೊಂದಿರುವ ಭಾರತ ವಿಶ್ವದಲ್ಲೇ ಇನ್ನಿತರ ರಾಷ್ಟ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಡಾ.ಎಚ್.ಉಮೇಶಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾವೇರಿ ಜಿಲ್ಲೆ ಎಸ್.ಜೆ.ಜೆ.ಎಂ.ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಹಾವೇರಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಹಾಗೂ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ 100 ಕಿಲೋಮೀಟರ್‍ಗೆ ವಿವಿಧ ಭಾಷೆಗಳನ್ನು ಮಾತನಾಡುವ ಹಾಗೂ ವಿಭಿನ್ನ ಸಂಸ್ಕೃತಿ ಕಾಣಬಹುದು, ವಿಭಿನ್ನ ಆಹಾರಗಳನ್ನು ತಿನ್ನುವ ಮತ್ತು ವೈವಿಧ್ಯಮಯ ಬಟ್ಟೆಗಳನ್ನು ಧರಿಸುವ ವಿವಿಧ ರೀತಿಯ ಜನರನ್ನು ಆಶ್ರಯಿಸುವ ಅನನ್ಯ ದೇಶವಾಗಿದ್ದು ವಿವಿಧತೆಯಲ್ಲಿ ಏಕತೆ ವಿಶ್ವದೆಲ್ಲೆಡೆ ಭಾರತವೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.

ತಹಶೀಲ್ದಾರ ಫೀರೋಜ್‍ಶಾ ತುಮ್ಮನಕಟ್ಟಿ ಮಾತನಾಡಿ, ನಮ್ಮ ದೇಶ ಸಾವಿರಾರು ವರ್ಷಗಳ ಸಂಸ್ಕೃತಿಯನ್ನು ಹೊಂದಿದೆ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಗಣಿತ, ತತ್ವಶಾಸ್ತ್ರ ಸೇರಿದಂತೆ ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮದೇ ಆದ ಕೊಡುಗೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಓದುಬರಹಗಳಿಂದ ಶೈಕ್ಷಣಿಕ ಬುದ್ಧಿಮತ್ತೆಯನ್ನು ಕಂಡುಕೊಳ್ಳಬಹುದು ಆದರೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರ್ತಿಸಲು ಸಾಧ್ಯವಾಗುತ್ತದೆ ಇಂತಹ ಪ್ರಾಯೋಗಿಕ ಪ್ರಯತ್ನಗಳು ಶಾಲಾ ಕಾಲೇಜು ಹಂತಗಳಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.

ಒಟ್ಟು ವಿವಿಧ 11 ಸ್ಫರ್ಧೆಗಳು ಜರುಗಿದ್ದು ಜಿಲ್ಲೆಯ ವಿವಿಧ ಕಾಲೇಜುಗಳಿಂದ 311 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಮಂಡಳಿ ಉಪಾದ್ಯಕ್ಷ ದತ್ತಾತ್ತೇಯ ಸಾಳುಂಕೆ ವಹಿಸಿದ್ದರು. ಮಂಡಳಿಯ ಸದಸ್ಯರಾದ ಅರುಣಕುಮಾರ ಪಾಟೀಲ, ವಿರೇಶ ಮತ್ತೀಹಳ್ಳಿ, ಪಪೂ.ಕಾಲೇಜು ನೌಕರರ ಸಂಘದ ಉಪಾಧ್ಯಕ್ಷ ಕೆ.ಪಿ.ಬ್ಯಾಡಗಿ, ಪ.ಪೂ.ಕಾಲೇಜ್ ಪ್ರಾಚಾರ್ಯ ಸಂಘದ ಅಧ್ಯಕ್ಷ ಡಾ.ನಾಗರಾಜ ದ್ಯಾಮನಕೊಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್.ನಿಸ್ಸೀಮಗೌಡ್ರ, ಕಾರ್ಯದರ್ಶಿ ಪ್ರಕಾಶ ಬಾರ್ಕಿ, ಎಸ್.ಸಿ.ಘಂಟೇರ, ಪ್ರಾಚಾರ್ಯರಾದ ಆನಂದ ಮುದಕಮ್ಮನವರ ಎನ್.ಡಿ.ಮಾಚೇನಹಳ್ಳಿ, ಡಾ.ಮಾಲತೇಶ್ ಬಂಡೆಪ್ಪನವರ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಡಿ.ಬಿ. ಕುಸಗೂರ ಸ್ವಾಗತಿಸಿದರು, ಸುವರ್ಣ ಶಿವಪ್ಪನವರ ನಿರೂಪಿಸಿದರು, ಕರಬಸಪ್ಪ ಹಡಪದ ವಂದಿಸಿದರು.