ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 10:- ವಿಶ್ವ ವಿದ್ಯಾನಿಲಯಗಳಲ್ಲಿ ಮಕ್ಕಳಿಗೆ ಪದವಿ ನೀಡುವ ಜೊತೆಗೆ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವಂತಹ ಖಾಯಂ ತರಬೇತಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಹೇಶ್ ಕುದರ್ ಅಭಿಮಾನಿಗಳ ಬಳಗ, ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಮಹೇಶ್ ಕುದರ್ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳಲ್ಲಿ ನೀಡುವ ಪದವಿ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ತಯಾರು ಮಾಡುವುದು ಬಹಳ ಅವಶ್ಯಕ. ಈ ನಿಟ್ಟಿನಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯದಿಂದ ಅಸಕ್ತ ವಿದ್ಯಾರ್ಥಿಗಳಿಗೆ ಖಾಯಂ ಆಗಿ ಕೆಎಎಸ್, ಪಿಎಸ್‍ಐ, ಪಿಡಿಓ, ಎಸ್‍ಡಿಎ ಮತ್ತು ಪಿಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ನೀಡಲು ಚಿಂತನೆ ಮಾಡಿ, ಸರ್ಕಾರಕ್ಕೆ ಕಳುಹಿಸಿದ್ದೇವೆ. ಇದು ಸಕಾರಗೊಂಡಲ್ಲಿ ದೂರದ ದೆಹಲಿ ಹಾಗೂ ಬೆಂಗಳೂರಿನಲ್ಲಿ ಈ ಭಾಗದ ವಿದ್ಯಾರ್ಥಿಗಳು ತರಬೇತಿಗಾಗಿ ಹೋಗುವುದು ತಪ್ಪುತ್ತದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ಮಹೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿ ಬಳಗದವರು ವಿವಿಧ ಸೇವಾ ಕಾರ್ಯಗಳೊಂದಿಗೆ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಅಮೋಘವರ್ಷ ಅಕಾಡೆಮಿಯವರು ಒಂದು ದಿನದ ತರಬೇತಿ ನೀಡಲು ಆಗಮಿಸಿರುವುದು ಹೆಮ್ಮೆ. ಜೊತೆಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ನಡೆಸಿ, ಸಾರ್ಥಕವಾದ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಮುಖ್ಯವಾದ ಶಕ್ತಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ರಚನೆ ಮಾಡುವ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಶೈಕ್ಷಣಿಕವಾಗಿ ಬಹಳ ಹಿಂದುಳಿದೆ ಜಿಲ್ಲೆಯಾಗಿದ್ದು, 2010-2011ರ ಅವಧಿಯಲ್ಲಿ ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿತ್ತು. ಇಲ್ಲಿನ ವಿದ್ಯಾರ್ಥಿಗಳ ಉತ್ಸಾಹವನ್ನು ಗಮನಿಸಿ, ಚಾಮರಾಜನಗರ ವಿಶ್ವವಿದ್ಯಾಲಯವನ್ನು ಘೋಷಣೆ ಮಾಡಿದೆ. ಪ್ರಥಮ ಕುಲಪತಿಯಾಗಿ ನನ್ನನ್ನು ನೇಮಕ ಮಾಡಿದ್ದು, ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲಿದೆ ಎಂದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೌಶಲ್ಯ ತರಬೇತಿ ಕೋರ್ಸುಗಳನ್ನು ಅರಂಭಿಸಲು ಚರ್ಚೆಯಾಗಿದೆ. ಜೊತೆಗೆ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಸಹ ಆರಂಭವಾಗಲಿದೆ. ಈ ಭಾಗದ ಮಕ್ಕಳಲ್ಲಿ ಕಲಿಕೆಯ ತುಡಿತ ಬಹಳ ಇದೆ. ಶ್ರಮಪಟ್ಟು ವ್ಯಾಸಂಗ ಮಾಡುತ್ತಿದ್ದಾರೆ. ಹುಟ್ಟಿನಿಂತಲೇ ಯಾರು ಬುದ್ದಿವಂತರಲ್ಲ. ಅವಕಾಶಗಳು ದೊರೆಯುತ್ತಿದ್ದಂತೆ ಅವರು ಪ್ರತಿಭಾವಂತರಾಗಿ ಬೆಳೆಯುತ್ತಿದ್ದಾರೆ. ನಮ್ಮೆಗೆಲ್ಲರು ದೊಡ್ಡ ಮಾಡಲ್ ಎಂದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅವರ ಮಾರ್ಗದಲ್ಲಿ ನಾವೆಲ್ಲರು ನಡೆಯೋಣ ಎಂದರು.
ಹಿರಿಯ ಮುಖಂಡರಾದ ನಗರಸಭಾ ಮಾಜಿ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹೇಶ್ ಕುದರ್ ಅಭಿಮಾನಿಗಳು ಬಹಳ ಸಾರ್ಥಕವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಒಂದು ದಿನ ತರಭೇತಿ ನೀಡಲು ಬೆಂಗಳೂರಿನ ಅಮೋಷ ವರ್ಷ ತಂಡದವರು ಆಗಮಿಸಿದ್ದಾರೆ. ಅವರು ಜಿಲ್ಲೆಯಲ್ಲಿ ಶಾಶ್ವತವಾಗಿ ತರಬೇತಿ ಕೇಂದ್ರವನ್ನು ಆರಂಭಿಸಲು ಮುಂದಾದರೆ ನನ್ನ ಎಲ್ಲ ಸಹಕಾರ ನೀಡುತ್ತೇನೆ. ಹೆಚ್ಚಿನದಾಗಿ ಬಡವರು ಹಾಗೂ ನಮ್ಮ ಸಮುದಾಯದ ಮಕ್ಕಳು ಈ ತರಬೇತಿಯಲ್ಲಿ ಭಾಗವಹಿಸಿ, ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡು ಅರ್ಥಿಕವಾಗಿ ಅಭಿವೃದ್ದಿಯಾಗಬೇಕು. ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವಂತಾಗಬೇಕು. ಇದಕ್ಕಾಗಿ ನನ್ನ ಎಲ್ಲಾ ರೀತಿಯ ಸಹಕಾರ ನೀಡಲು ಬದ್ದನಾಗಿರುವುದಾಗಿ ತಿಳಿಸಿದರು.
ಬಳಗದ ಅಧ್ಯಕ್ಷ ಡಾ. ಎಂ.ಕುಮಾರ್ ಚಿಕ್ಕಹೊಳೆ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ. ಮಹೇಶ್, ಸಂತೇಮರಹಳ್ಳಿ ಆಡಳಿತಾಧಿಕಾರಿ ವೈದ್ಯಾಧಿಕಾರಿ ಡಾ. ರೇಣುಕಾದೇವಿ, ಅಮೋಘ ವರ್ಷ ಅಕಾಡೆಮಿಯ ರಾಮಣ್ಣಗೌಡ ಜಿ.ಪಿ., ಪ್ರಾಂಶುಪಾಲ ಎಚ್. ಚಂದ್ರಮ್ಮ, ಪ್ರಾಧ್ಯಾಪಕರಾದ ಶಶಿಕಲಾ, ಸಫೀಯಾಬಾನು, ನಗರಸಭೆ ಆಯುಕ್ತ ರಾಮದಾಸ್, ಕಾವೇರಿ ಡಯಾಗ್ನೋಸ್ಟಿಕ್ ಮಾಲೀಕ ಆರ್.ಎನ್. ರಾಮು, ಶ್ರೀನಿಧಿ ಕುದರ್, ಬಳಗದ ಗ್ರಾ.ಪಂ. ಸದಸ್ಯ ಪ್ರಶಾಂತ್, ಉಮ್ಮತ್ತೂರು ಚಂದ್ರು, ಗಣೇಶ್‍ಪ್ರಸಾದ್, ಮರಿಸ್ವಾಮಿ, ಬಸಪ್ಪಪಾಳ್ಯ ರೇವಣ್ಣ, ಮಂಜು, ನಾಗರಾಜು, ಮಹೇಶ್ ಬಸವಾಪುರ, ಪರಶಿವಮೂರ್ತಿ, ಶಶಿ, ಚನ್ನಪ್ಪ, ರವಿಕುಮಾರ್, ಮಂಜು, ಬಸವರಾಜು, ಮೊದಲಾದವರು ಇದ್ದರು.