ವಿವಿಎನ್ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ

ಕಲಬುರಗಿ,ಜು.7:ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಚುನಾಯಿತ ವಿದ್ಯಾರ್ಥಿ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಶೈಕ್ಷಣಿಕ ನಿರ್ದೇಶಕರಾದ ರಾಮಚಂದ್ರ ಶಿಂಧೆ ಆಗಮಿಸಿದ್ದರು. ಚುನಾಯಿತ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಶಾಲಾ ದಿನಗಳಿಂದಲೇ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಹಾತ್ಮಾ ಗಾಂಧೀಜಿ, ಸುಭಾಶ್ಚಂದ್ರ ಭೋಸ, ಡಾ. ಬಿ. ಆರ್. ಅಂಬೇಡ್ಕರ್ ಹಾಗೆ ಆದರ್ಶ ನಾಯಕರಾಗಿ ದೇಶ ಸೇವೆ ಮಾಡಬೇಕು, ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅದ್ಯಕ್ಷ ಸುವರ್ಣ ಭಗವತಿ ಮಾತನಾಡಿ, ದೇಶದ ಅಭಿವೃದ್ಧಿಗೆ ಉತ್ತಮ ನಾಯಕರ ಅಗತ್ಯವಿದೆ. ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ನೀವೇ ಆ ಜವಾಬ್ದಾರಿ ತೆಗೆದುಕೊಳ್ಳಬೇಕು, ವಿಶೇಷವಾಗಿ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ವಿಧಾನ ಸಭೆ, ಲೋಕಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸಿ ಉತ್ತಮ ಕಾನೂನುಗಳನ್ನು ರಚಿಸಬೇಕು ಎಂದರು.
ಕಳೆದ ವಾರ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೀಡಿದ ಮತಗಳ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲೆಯ ನಾಯಕರಾಗಿ ಹತ್ತನೇ ತರಗತಿಯ ಗೌರಿ.ಸಿ. ಹಾಗೂ ಸೂರ್ಯಮಿತ್ರ. ಎಸ್. ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ, ಶೋಭಾ ಜವಳಗಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಶ್ರೀಪಾದ ನಾಯಕ ಸ್ವಾಗತಿಸಿದರು, ಕನ್ನಡ ಶಿಕ್ಷಕಿ ರತ್ನಾ ವಂದಿಸಿದರು.