
ಕಲಬುರಗಿ.ಮಾ.07: ಇಲ್ಲಿನ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಮಂಗಳವಾರ ಹೋಳಿ ಹುಣ್ಣಿಮೆ ಪ್ರಯುಕ್ತ ಮಕ್ಕಳು ಬಣ್ಣದಾಟವಾಡಿ ಸಂಭ್ರಮಿಸಿದರು.
ಇದೇ ಮೊದಲ ಬಾರಿ ಶಾಲಾ ಆಡಳಿತ ಮಂಡಳಿ ವತಿಯಿಂದಲೇ ವಿದ್ಯಾರ್ಥಿಗಳಿಗಾಗಿ ಬಣ್ಣದೋಕುಳಿ ಆಟ ಮತ್ತು ಮೊಸರಿನ ಗಡಿಗೆ ಒಡೆಯುವ ಸಾಹಸ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ, ಎಲ್‍ಕೆಜಿಯಿಂದ ಮೂರನೇ ತರಗತಿ, ನಾಲ್ಕರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಣ್ಣದಾಟಕ್ಕೆ ಶಾಲೆಯ ಮೈದಾನ ಸಜ್ಜುಗೊಳಿಸಲಾಗಿತ್ತು. ಇದರ ಜೊತೆಗೆ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕವಾಗಿ ಬಣ್ಣದಾಟ ಮತ್ತು ಮೊಸರಿನ ಗಡಿಗೆ ಒಡೆಯುವ ಸಾಹಸ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.
ಮೇಲಾಗಿ, ಶಾಲೆಯ ವಿದ್ಯಾರ್ಥಿಗಳನ್ನು ನಿತ್ಯ ಕರೆದೊಯ್ಯುವ ವಾಹನ ಚಾಲಕರು ಹಾಗೂ ಸುರಕ್ಷಾ ಸಿಬ್ಬಂದಿಗಾಗಿ ಸಹ ಪ್ರತ್ಯೇಕವಾಗಿ ಮೊಸರಿನ ಗಡಿಗೆ ಒಡೆಯುವ ಸಾಹಸ ಏರ್ಪಡಿಸಲಾಗಿತ್ತು. ಹಾಗಾಗಿ, ವಿದ್ಯಾರ್ಥಿಗಳು ಶಾಲಾ ಅವಧಿ ಮುಕ್ತಾಯಗೊಂಡ ನಂತರದ ಸುಮಾರು ಎರಡು ತಾಸು ಬಣ್ಣದಾಟದಲ್ಲಿ ತೊಯ್ದು ತೊಪ್ಪೆಯಾಗಿ ಖುಷಿಪಟ್ಟರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸುವರ್ಣಾ ಎಸ್.ಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಸಮನ್ವಯಾಧಿಕಾರಿಗಳಾದ ಸುಮಾ ಎಸ್.ಭಗವತಿ, ಸುಷ್ಮಾ ಎಸ್.ಭಗವತಿ ಸೇರಿದಂತೆ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಬೋಧಕೇತರ ಸಿಬ್ಬಂದಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.