ವಿವಾಹ ಸಮಾರಂಭದಲ್ಲಿ ಅಗ್ನಿ ದುರಂತ: ೧೦೦ ಮಂದಿ ಸಾವು

ನಿನೇವೆಹ್ (ಇರಾಕ್), ಸೆ.೨೭- ವಿವಾಹ ಸಮಾರಂಭದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ ೧೦೦ ಮಂದಿ ಸಜೀವ ದಹನವಾಗಿ ಇತರ ೧೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಇರಾಕ್‌ನ ನಿನೆವೆಹ್ ಪ್ರಾಂತ್ಯದ ಹಮ್ದಾನಿಯಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ ಎಂದು ಇರಾಕ್ ನ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಆದರೆ ಅಗ್ನಿ ದುರಂತಕ್ಕೆ ಕಾರಣ ಸದ್ಯದ ಮಟ್ಟಿಗೆ ಬಹಿರಂಗವಾಗಿಲ್ಲ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸ್ಥಳೀಯ ಮೂಲಗಳು ಹೇಳಿವೆ.
ಈಶಾನ್ಯ ಪ್ರದೇಶದ ಬೃಹತ್ ಸಮಾರಂಭಗಳ ಹಾಲ್ ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಪಟಾಕಿ ಸಿಡಿಸುವ ವೇಳೆ ಬೆಂಕಿ ಹತ್ತಿಕೊಂಡಿತು ಎಂದು ಸ್ಥಳೀಯ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ತಕ್ಷಣದ ಮಟ್ಟಿಗೆ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಅದರೆ ಕಟ್ಟಡದ ಒಳಗಿದ್ದ ಅತ್ಯಂತ ದಹನಕಾರಿ ವಸ್ತುಗಳಿಂದ ಅಗ್ನಿ ಮತ್ತಷ್ಟು ವ್ಯಾಪಿಸಿರಬಹುದೆಂದು ಅಂದಾಜಿಸಲಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಕಟ್ಟಡವನ್ನು ಸಾಹಸದಿಂದ ಏರಿ ಘಟನೆಯಲ್ಲಿ ಉಳಿದುಕೊಂಡಿರುವವರನ್ನು ಅವಶೇಷಗಳ ಅಡಿಯಲ್ಲಿ ಹುಡುಕುತ್ತಿರುವುದು ಘಟನಾ ಸ್ಥಳದ ವಿಡಿಯೊಗಳಿಂದ ಕಂಡುಬರುತ್ತಿದೆ. ಈ ಕಟ್ಟಡವನ್ನು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ಸಾಮಗ್ರಿಗಳಿಂದ ಕಟ್ಟಲಾಗಿದೆ ಎನ್ನುವ ಅಂಶ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಇದು ದಿಢೀರನೇ ಅಗ್ನಿ ವ್ಯಾಪಿಸಲು ಕಾರಣವಾಯಿತು ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ. ಅಧಿಕೃತ ಹೇಳಿಕೆಯ ಪ್ರಕಾರ, ಇರಾಕ್ ನ ಕೇಂದ್ರೀಯ ಅಧಿಕಾರಿಗಳು ಮತ್ತು ಇರಾಕ್ ನ ಅರೆ-ಸ್ವಾಯತ್ತ ಖುರ್ದಿಸ್ತಾನ ಪ್ರದೇಶದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆ?ಯಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದಾರೆ. ಹೆಚ್ಚು ಸುಡುವ, ಕಡಿಮೆ ವೆಚ್ಚದ ಕಟ್ಟಡ ಸಾಮಗ್ರಿಗಳ ಬಳಕೆಯ ಪರಿಣಾಮವಾಗಿ ಬೆಂಕಿಯು ಹಾಲ್‌ನ ಕೆಲವು ಭಾಗಗಳ ಕುಸಿತಕ್ಕೆ ಕಾರಣವಾಯಿತು, ಬೆಂಕಿ ಸಂಭವಿಸಿದ ಕೂಡಲೇ ಕೆಲವೇ ನಿಮಿಷಗಳಲ್ಲಿ ಎಲ್ಲವೂ ಸುಟ್ಟು ಕರಕಲಾಗಿದೆ ಎಂದು ಇರಾಕ್‌ನ ನಾಗರಿಕ ರಕ್ಷಣಾ ನಿರ್ದೇಶನಾಲಯವು ಇರಾಕ್‌ನ ರಾಜ್ಯ ಸುದ್ದಿ ಸಂಸ್ಥೆ ಐಎನ್‌ಎ ವರದಿ ಮಾಡಿದೆ.