ವಿವಾಹ ನೆಪದಲ್ಲಿ ವಂಚನೆ ಖದೀಮನ ಸೆರೆ

ಬೆಂಗಳೂರು,ಏ.೧೧-ಶ್ರೀಮಂತ ಯುವತಿಯರು, ವಯಸ್ಸು ಮೀರಿದ ಮಹಿಳೆಯರನ್ನು ಮದುವೆಯಾಗುವ ನಾಟಕಮಾಡಿ ವಂಚಿಸುತ್ತಿದ್ದ ಖತರ್ನಾಕ್ ಖದೀಮನನ್ನು ಜೆ.ಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಸ್ವವಿವರ ಹಾಕಿ ವರರನ್ನು ಹುಡುಕುವ ವಧುವನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಮ್ಯಾಟ್ರಿಮೋನಿ ವಂಚಕ ದೀಪಕ್ ಬಂಧಿತ ಆರೋಪಿಯಾಗಿದ್ದಾನೆ.
ಜೆ.ಪಿ ನಗರದ ೪೧ ವರ್ಷದ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಲ್ಲಿ ವರಾನ್ವೇಷಣೆ ಮಾಡುತ್ತಿದ್ದರು. ಈ ವೇಳೆ ಮ್ಯಾಟ್ರಿಮೋನಿ ಆ?ಯಪ್‌ನಲ್ಲಿ ಆರೋಪಿ ದೀಪಕ್ ಪರಿಚಯವಾಗಿ ಮಧುರೈನಲ್ಲಿ ತಾನೊಬ್ಬ ಬ್ಯಾಂಕ್ ಉದ್ಯೋಗಿ ಎಂದು ನಂಬಿಸಿದ್ದಲ್ಲದೇ ಮಹಿಳೆಯನ್ನು ಮದುವೆ ಆಗುವುದಾಗಿ ಹೇಳಿದ್ದಾನೆ.
ಮದುವೆಯ ಭರವಸೆ ಹಿನ್ನೆಲೆಯಲ್ಲಿ ಸಂತ್ರಸ್ತೆ ಆತನೊಟ್ಟಿಗೆ ಪ್ರತಿನಿತ್ಯ ಫೋನ್ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ದಿನಕಳೆದಂತೆ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಹೀಗಿದ್ದಾಗ ಒಂದು ದಿನ ವಂಚಕ ದೀಪಕ್, ಮಹಿಳೆಗೆ ಮಾರ್ಚ್ ೩ರಂದು ಫೋನ್ ಮಾಡಿ ತನ್ನ ವಾಲೇಟ್ ಕಳೆದು ಹೋಗಿದೆ. ತುರ್ತಾಗಿ ೩೦ ಸಾವಿರ ರೂ. ಹಣ ಬೇಕಿದೆ ಎಂದು ಆಕೆಯನ್ನು ಪುಸಲಾಯಿಸಿ ಹಣ ಹಾಕಿಸಿಕೊಂಡಿದ್ದ.
ಕೆಲ ದಿನದ ನಂತರ ಮಹಿಳೆಗೆ ಫೋನ್ ಮಾಡಿದ ದೀಪಕ್, ತಾನು ಉಪಯೋಗಿಸುತ್ತಿರುವ ಫೋನ್ ನಂಬರ್ ಕಚೇರಿಯದ್ದಾಗಿದ್ದು,ಅದರಲ್ಲಿ ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ. ನಿನ್ನ ಹೆಸರಲ್ಲಿ ಸಿಮ್‌ವೊಂದನ್ನು ಖರೀದಿಸಿ ಕೊಡು ಎಂದಿದ್ದ. ತಾನು ಕಳಿಸುವ ಆಫೀಸ್ ಬಾಯ್‌ಗೆ ಸಿಮ್ ಕಾರ್ಡ್ ಕೊಟ್ಟು ಕಳಿಸು ಎಂದಿದ್ದ. ಅದರಂತೆ ತನ್ನ ಹೆಸರಲ್ಲಿ ಸಿಮ್ ಖರೀದಿಸಿ ಆರೋಪಿಗೆ ಕಳುಹಿಸಿದ್ದರು.
ಈ ಎಲ್ಲ ಘಟನೆಗಳಿಂದ ಅನುಮಾನಗೊಂಡ ಮಹಿಳೆ, ಈ ವಿಚಾರವನ್ನೆಲ್ಲ ತಮ್ಮ ಸ್ನೇಹಿತರೊಟ್ಟಿಗೆ ತಿಳಿಸಿದ್ದಾರೆ. ಅವರು ಖುದ್ದು ವಿಚಾರ ಮಾಡಿದಾಗ ಈತನ ವಂಚನೆ ಬಯಲಾಗಿದೆ. ಮದುವೆ ಆಗುವುದಾಗಿ ನಂಬಿಸಿ ಆಕೆಯಿಂದಲೇ ಹಣ ಪಡೆದು, ನಂತರ ಸಿಮ್ ಖರೀದಿಸಿ ಬೇರೊಬ್ಬರಿಗೆ ವಂಚಿಸುತ್ತಿದ್ದ. ಆರೋಪಿ ದೀಪಕ್ ಇದೇ ರೀತಿಯಾಗಿ ಹಲವು ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಹಿಳೆ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿ ಆರೋಪಿ ದೀಪಕ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.