ವಿವಾಹವು ಪವಿತ್ರ ಬಂಧನ

ಲಕ್ಷ್ಮೇಶ್ವರ,ಜ.16: ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರರು ಹಾಲುಜೇನಿನಂತೆ ಅನ್ಯೋನ್ಯತೆಯಿಂದ ಜೀವನ ಸಾಗಿಸುವ ಪವಿತ್ರ ಬಂಧವಾಗಿದೆ ಎಂದು ಸವಣೂರ ದೊಡ್ಡಹುಣಸೇಮಠದ ಶ್ರೀ ಚನ್ನಬಸವ ಮಹಸ್ವಾಮಿಗಳು ನುಡಿದರು.
ಅವರು ಭಾನುವಾರ ಸಮೀಪದ ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ. ನವ ದಂಪತಿಗಳು ತಂದೆ-ತಾಯಿ, ಅತ್ತಿ-ಮಾವ, ಗುರು ಹಿರಿಯರಲ್ಲಿ ವಿಧೇಯತೆ, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಸಂಸಾರದ ಗುಟ್ಟು ಬಿಟ್ಟು ಕೊಡದೇ ಪ್ರೀತಿ, ವಿಶ್ವಾಸದಿಂದ ಸಂಸಾರದ ಜೋಡೆತ್ತಿನ ಬಂಡಿ ಸರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ. ಸಂಪ್ರದಾಯ, ಸಂಸ್ಕøತಿ, ಧರ್ಮ ಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು. ಲಿಂ.ನಿರಂಜನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಚನ್ನವೀರ ಸ್ವಾಮಿಗಳು ಸಮಾಜಮುಖಿ ಕಾರ್ಯದಲ್ಲಿ ಹೆಸರಾಗಿದ್ದು ಭಕ್ತರು ಸಹಾಯ-ಸಹಕಾರ ನೀಡಬೇಕೆಂದರು ಎಂದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ ಹೂವಿನಶಿಗ್ಲಿ ವಿರಕ್ತಮಠವು ಲಿಂ. ನಿರಂಜನಾನಂದ ಮಹಾಸ್ವಾಮಿಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಿಂದ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠವು ಶಿಕ್ಷಣ, ಧರ್ಮ, ಸಾಮಾಜಿಕ ಚಟುವಟಿಕೆಗಳ ಮೂಲಕ ನಾಡಿಗೆ ಹೆಸರಾಗಿದೆ. ಸಾಮೂಹಿಕ ವಿವಾಹಗಳಿಂದ ಬಡವರು ಮತ್ತು ಅಸಹಾಯಕರಿಗೆ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ. ಅನಾವಶ್ಯಕ ದುಂದು ವೆಚ್ಚ, ಆಡಂಬರ, ವರದಕ್ಷಣೆ ತಡೆದು ಸಾಮೂಹಿಕ ವಿವಾಹದ ಮಹತ್ವ ಸಾರುವ ಉದ್ದೇಶ ಶ್ರೀಮಠದ್ದಾಗಿದೆ.
ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಅಧ್ಯಕ್ಷತೆ ಮತ್ತು ಗುಡ್ಡದಆನ್ವೇರಿ ಮಠದ ಶಿವಯೋಗಿಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ವೇದಿಕೆಯಲ್ಲಿದ್ದ ಲಕ್ಷ್ಮೇಶ್ವರ ತಾಲೂಕ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಗುರುಕುಲ ಶಿಕ್ಷಣಕ್ಕೆ ಸಹಾಯ ನೀಡಿದ ಚಂದ್ರಣ್ಣ ಓದುನವರ, ಮಹಾಬಳೇಶ್ವರಪ್ಪ ಬೇವಿನಮರದ, ಎಂ.ಎಂ.ಮೈದೂರ, ಚನ್ನಬಸಪ್ಪ ಬೆಂತೂರ, ರಾಜಕುಮಾರ ಅಲಬಿದೆ, ಸೋಮಶೇಖರ ಕೆರಿಮನಿ ಅವರನ್ನು ಸನ್ಮಾನಿಸಲಾಯಿತು. ಗವಿಸಿದ್ದ ಶಾಸ್ತ್ರೀಗಳು, ಶಿಕ್ಷಕ ರೇಣುಕಗೌಡ ಪಾಟೀಲ, ಮಹದೇವ ಬಿಷ್ಟನವರ, ಕೆ.ಎಸ್.ಇಟಗಿಮಠ, ಶಿವಾನಂದ ಕಟ್ಟಿಮನಿ ನಿರೂಪಿಸಿದರು. ನಂತರ ಶ್ರೀಗಳ ತುಲಾಭಾರ, ಗುರುಕುಲ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ, ಕಡುಬಿನ ಕಾಳಗ ಹಾಗೂ ಮಹಾತ್ಮರ ಬದುಕು- ಬೆಳಕು ಕುರಿತು ಚಿಂತನಗೋಷ್ಠಿ ನಡೆಯಿತು. ಜಾತ್ರೆಗೆ ಆಗಮಿಸಿದ ಅಪಾರ ಭಕ್ತ ಸಮೂಹ ಜಾತ್ರೆಯ ವಿಶೇಷತೆಯಾದ ಕರಿಂಡಿ, ಜೋಳದ ರೊಟ್ಟಿ, ಹುಗ್ಗಿ ಸವಿ ಸವಿದರು.