ವಿವಾಹವಾಗುವುದಾಗಿ 37 ಲಕ್ಷ ವಂಚನೆ ಇಬ್ಬರು ಆಫ್ರಿಕನ್ ಪ್ರಜೆಗಳ ಸೆರೆ

ಪಣಜಿ,ಜ.೧೩-ಮಹಿಳೆಯೊಬ್ಬರನ್ನು ವಿವಾಹವಾಗುವುದಾಗಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಆಮಿಷವೊಡ್ಡಿ ೩೭ ಲಕ್ಷ ರೂ.ಪಡೆದು ವಂಚಿಸಿದ್ದ ಇಬ್ಬರು ಆಫ್ರಿಕನ್ ಪ್ರಜೆಗಳನ್ನು ಗೋವಾ ಮತ್ತು ದೆಹಲಿಯ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕ್ಯಾಮರೂನ್ ನಿವಾಸಿ ತ್ಸೌಪಾ ಸೆಬಾಸ್ಟಿಯನ್, ಐವರಿಕೋಸ್ಟ್‌ನ ಸೆನಹೌನ್ ಫ್ರಾನ್ಕ್ ಬಂಧಿತ ಆರೋಪಿಗಳು. ಇವರಿಬ್ಬರು ರಾಜಧಾನಿ ದೆಹಲಿಯ ಮೆಹ್ ರೌಲಿ ಪ್ರದೇಶದಲ್ಲಿ ವಾಸವಾಗಿದ್ದರು.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ತಮ್ಮನ್ನು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬರು ದೆಹಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಾನು ವಿದೇಶದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದ ಆರೋಪಿ, ಮಹಿಳೆಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ಕಳುಹಿಸುತ್ತಿದ್ದೇನೆ ಎಂದು ಹೇಳಿದ್ದ.
ಬಳಿಕ ಕಸ್ಟಮ್ಸ್ ಶುಲ್ಕದ ನೆಪದಲ್ಲಿ ಮಹಿಳೆಯಿಂದ ಮತ್ತೊಬ್ಬ ಆರೋಪಿಯ ಮೂಲಕ ಕರೆ ಮಾಡಿಸಿ ಒಟ್ಟು ೩೭ ಲಕ್ಷ ರೂ. ಪಡೆದು ವಂಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಾವು ಮೋಸ ಹೋಗಿರುವುದು ತಿಳಿದ ತಕ್ಷಣ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡಾದ ಇದರ ಹಿಂದೆ ಸಂಘಟಿತ ವಂಚಕರ ತಂಡ ಇರುವುದು ಪತ್ತೆಯಾಗಿತ್ತು.
ಆರೋಪಿಗಳನ್ನು ಬಂಧಿಸಿ ಅವರಿಂದ ಹಲವು ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ನಕಲಿ ಗುರುತಿನ ಚೀಟಿಗಳನ್ನು ೬೫೦ಕ್ಕೂ ಅಧಿಕ ಜನರ ಡಾಟಾಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.