ಬೆಂಗಳೂರು, ಜೂ.೨೫- ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಹಮ್ಮಿಕೊಂಡಿರುವ ಮೂರು ದಿನಗಳ ತರಬೇತಿ ಶಿಬಿರದಲ್ಲಿ ಸ್ಫೂರ್ತಿದಾಯಕ ಭಾಷಣದ ವ್ಯಕ್ತಿಗಳ ಆಯ್ಕೆ ಕುರಿತು ಸ್ಪೀಕರ್ ಯು.ಟಿ.ಖಾದರ್ ಅವರ ನಡೆಗೆ ತೀವ್ರ ಟೀಕೆ ಕೇಳಿಬಂದ ಹಿನ್ನೆಲೆ ವಿವಾದಿತ ಸಂಪನ್ಮೂಲ ವ್ಯಕ್ತಿಗಳ ಹೆಸರನ್ನು ಕೈಬಿಡಲಾಗಿದೆ.
ನೆಲಮಂಗಲ ಬಳಿಯಿರುವ ಧರ್ಮಸ್ಥಳದ ನ್ಯಾಚುರೋಪತಿ ಕೇಂದ್ರದಲ್ಲಿ ಜೂನ್ ೨೬ರಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದರು.
ಇದರ ಬೆನ್ನಲ್ಲೇ, ಧಾರ್ಮಿಕ ಪ್ರತಿನಿಧಿಗಳ, ವಿವಾದಾಸ್ಪದ ವ್ಯಕ್ತಿಗಳ ಪ್ರವಚನವನ್ನು ಕೈ ಬಿಡಬೇಕು ಎಂದು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ವಲಯ ಒಕ್ಕೊರಲಿನಿಂದ ಆಗ್ರಹಿಸಿದ್ದವು. ಜತೆಗೆ ಈ ವಿವಾದ ದಿನೇ ದಿನೇ ಹೆಚ್ಚಾದ ಕಾರಣ ಇದೀಗ ಅಧಿಕೃತವಾಗಿ ಗುರುರಾಜ ಕರ್ಜಗಿ, ಶ್ರೀ ಶ್ರೀ ರವಿಶಂಕರ ಗುರೂಜಿ ಹೆಸರುಗಳನ್ನು ಕೈಬಿಡಲಾಗಿದೆ.
ಈ ಸಂಬಂಧಿಸಿದಂತೆ ಶಿಬಿರದ ಆಹ್ವಾನ ಪತ್ರಿಕೆ ಹೊರಬಿದ್ದಿದ್ದು, ಗುರುರಾಜ ಕರ್ಜಗಿ ಬದಲಾಗಿ ಮುಖ್ಯಮಂತ್ರಿ ಚಂದ್ರು ಅವರು
ಶಾಸನ ಸಭೆಯಲ್ಲಿ ಕರ್ತವ್ಯದ ಹಾಸ್ಯಭರಿತ ನಿರ್ವಹಣೆ ಕುರಿತು ಮಾತನಾಡಲಿದ್ದಾರೆ. ಹಾಗೇ, ರವಿಶಂಕರ ಗುರೂಜಿ ಬದಲಾಗಿ ಬ್ರಹ್ಮ ಕುಮಾರಿಸ್ ಸಂಸ್ಥೆಯ ಬಿ.ಕೆ.ವೀಣಾ,ಬಿ.ಕೆ.ಭುವನೇಶ್ವರಿ ಸಂವಾದ ನಡೆಸಿಕೊಡಲಿದ್ದಾರೆ.
ಶಿಬಿರಕ್ಕೆ ಆಯ್ಕೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳ ಕುರಿತು ಅನೇಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು ಸಂಸದೀಯ ವ್ಯವಸ್ಥೆಯ ಮೌಲ್ಯಗಳ ರಕ್ಷಣೆಯ ದೃಷ್ಟಿಯಿಂದ ಈ ವಿಚಾರವನ್ನು ಮರು ಪರಿಶೀಲಿಸಬೇಕು ಹಲವರು ಆಗ್ರಹಿಸಿದ್ದರು.