ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ಪದ್ಮ ಪ್ರಶಸ್ತಿ ಹಿಂಪಡೆಯಲು ಹೆಚ್ಚಿದ ಆಗ್ರಹ

ಮುಂಬೈ, ನ.12- ಸ್ವಾತಂತ್ರ್ಯೋತ್ಸವ ವಿಷಯವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನೀಡಿರುವ ಪದ್ಮ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಡಗಳು ಹೆಚ್ಚಾಗುತ್ತವೆ.

ಬೆಳಗ್ಗೆಯಷ್ಟೇ ಕಾಂಗ್ರೆಸ್ ಪಕ್ಷ ಒತ್ತಾಯಿಸಿದ್ದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ವಿಕಾಸ ಆಗಾಡಿ ಮೈತ್ರಿ ಪಕ್ಷ,ಕೂಡ ಧ್ವನಿ ಗೂಡಿಸಿ ನಟಿ ಕಂಗನಾ ಅವರಿಗೆ ನೀಡಿರುವ ಪದ್ಮ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದೆ.

ದೇಶಕ್ಕೆ 1947 ರಲ್ಲಿ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ. ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು 2014ರಲ್ಲಿ ಎನ್ನುವ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ವಿಕಾಸ ಆಗಾಡಿ ಮೈತ್ರಿ ಪಕ್ಷದ ನಾಯಕರಲ್ಲಿ ಒಬ್ಬರಾದ ಶಿವಸೇನೆಯ ಸಂಜಯ್ ರಾವುತ್, ನಟಿ ಕಂಗನಾ ರಣಾವತ್ ಹೇಳಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಈ ಬಗ್ಗೆ ಸ್ಪಷ್ಟ ಪಡಿಸಬೇಕು ಅಲ್ಲದೆ ಅವರಿಗೆ ಕಂಗನಾ ಅವರಿಗೆ ನೀಡಿರುವ ಪದ್ಮ ಪ್ರಶಸ್ತಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ಮೂಲಕ ದೇಶದಲ್ಲಿ ಕಿಚ್ಚು ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಈ ರೀತಿಯ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ನಟಿ ಕಂಗನಾ ರಣಾವತ್ ಅವರ ಹೇಳಿಕೆ ಸ್ವಾತಂತ್ರ ಹೋರಾಟಗಾರರಿಗೆ ಮಾಡಿದ ಅಪಮಾನ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.