ವಿರೋಧ ವ್ಯಕ್ತಪಡಿಸಿದ್ದ ಹಳೇ ಅರ್ಚಕ ಸೇರಿ 20ಕ್ಕೂ ಹೆಚ್ಚು ಜನರ ಬಂಧನ


ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲು ತೆರೆದ ಜಿಲ್ಲಾಡಳಿತ
ದಾವಣಗೆರೆ,ನ.೭: ಇಲ್ಲಿನ ಪಿಬಿ ರಸ್ತೆಯ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಬಾಗಿಲು ತೆಗೆಯಲು ವಿರೋಧ ವ್ಯಕ್ತಪಡಿಸಿದ್ದ ಹಳೇ ಅರ್ಚಕ ಮತ್ತವರ ಸಂಬಂಧಿಕರನ್ನು ಬಂಧಿಸಿ, ದೇಗುಲದ ಬಾಗಿಲು ತೆರೆಸಿ ಹೊಸ ಅರ್ಚಕರಿಂದ ಪೂಜೆ ಮಾಡಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನದ ಅರ್ಚಕನಾಗಿದ್ದ ಬಿ.ಜಿ.ಲಿಂಗೇಶ್ ವಿರುದ್ಧ ಕೆಲ ದೂರುಗಳು ಬಂದ ಕಾರಣದಿಂದ ಜಿಲ್ಲಾಧಿಕಾರಿಗಳು, ಅರ್ಚಕನನ್ನು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹಳೇ ಅರ್ಚಕ ಲಿಂಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕಾರಣದಿಂದ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲಿಗೆ ಬೀಗ ಬಿದ್ದು, ಪೂಜೆ, ಪುನಸ್ಕಾರಗಳು ಸ್ಥಗಿತಗೊಂಡಿದ್ದವು.
ಆದರೆ, ಶನಿವಾರ ಬೆಳಗಿನ ಜಾವ ಕಂದಾಯ ನಿರೀಕ್ಷಕ ಮುಜರಾಯಿ ಇಲಾಖೆ ನೇಮಿಸಿರುವ ಹೊಸ ಅರ್ಚಕನೊಂದಿಗೆ ದೇವಸ್ಥಾನದ ಬೀಗ ತೆರೆಯಲು ಆಗಮಿಸಿದ್ದರು. ಆಗ ಅಲ್ಲಿಯೇ ವಾಸವಾಗಿರುವ ಹಳೇ ಅರ್ಚಕ ಲಿಂಗೇಶ್ ಮತ್ತು ಅವರ ಸಂಬಂಧಿಕರು, ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಬೀಗ ತೆರೆದು ಪೂಜೆ ನಡೆಸಲು ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಕೆಲ ಕಾಲ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಅಧಿಕಾರಿಗಳೊಂದಿಗೆ ಚರ್ಚಿಸಿ ದೇಗುಲದ ಬೀಗ ತೆರೆಸಲು ಮುಂದಾದರು. ಆಗ ಈಗಾಗಲೇ ವಜಾಗೊಂಡಿರುವ ಅರ್ಚಕ ಲಿಂಗೇಶ್, ಪತ್ನಿ ಸುನೀತಾ ಹಾಗೂ ಅವರ ಕುಟುಂಬ ವರ್ಗದವರೂ ನಾವು ಯಾವುದೇ ಕಾರಣಕ್ಕೂ ಬೀಗ ತೆರೆಯಲು ಅವಕಾಶ ನೀಡುವುದಿಲ್ಲ. ಹೈ ಕೋರ್ಟ್‌ನಲ್ಲಿ ಪ್ರಕರಣವಿದ್ದು, ಜಿಲ್ಲಾಡಳಿತ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ ಎಂಬುದಾಗಿ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದೆ. ಆದ್ದರಿಂದ ನ್ಯಾಯಾಲಯ ಪ್ರಸ್ತುತ ದೇವಸ್ಥಾನದಲ್ಲಿ ನಡೆಯುತ್ತಿರುವ ಪೂಜೆ, ಪುನಸ್ಕಾರದ ಭಾವಚಿತ್ರ ಮತ್ತು ವೀಡಿಯೋ ಸಲ್ಲಿಸುವಂತೆ ಸೂಚಿಸಿದ್ದು, ಸೋಮವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದ್ದು, ಅಲ್ಲಿ ಇವುಗಳನ್ನು ಸಲ್ಲಿಸದಿದ್ದರೆ, ಜಿಲ್ಲಾಧಿಕಾರಿಗಳ ತಲೆ ದಂಡ ಆಗಲಿದೆ. ಆ ಕಾರಣಕ್ಕೆ ಇಂದು ಬಾಗಿಲು ತೆರೆಸಿ, ಪೂಜೆ ಸಲ್ಲಿಸಿ ಅದರ ವಿಡಿಯೋ ತುಣುಕುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಹುನ್ನಾರ ಇದರ ಹಿಂದೆ ಅಡಗಿದೆ.
ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಬೀಗ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ದೇವಸ್ಥಾನದ ಬಾಗಿಲಿನಲ್ಲಿ ನಿಂತು ಪ್ರತಿರೋಧ ಒಡ್ಡಿದ್ದರು. ಬಾಗಿಲು ತೆಗೆಯವಲು ಅವಕಾಶ ಮಾಡಿಕೊಡಿ, ಪ್ರಕರಣವನ್ನು ಕೋರ್ಟ್‌ನಲ್ಲಿ ಎದುರಿಸಿಕೊಳ್ಳಿ ಎಂದು ಅಧಿಕಾರಿಗಳು ಎಷ್ಟೇ ಮನ ವೋಲಿಸಿದರೂ ಅದಕ್ಕೆ ಹಳೇ ಅರ್ಚಕರ ಕುಟುಂಬದವರು ಜಗ್ಗಲಿಲ್ಲ.
ಈ ಹಿನ್ನೆಲೆಯಲ್ಲಿ ಪೊಲೀಸರು ಹಳೇ ಅರ್ಚಕ ಲಿಂಗೇಶ್, ಅವರ ಸಹೋದರ ಶಿವಯೋಗಿ, ಲಿಂಗೇಶ್ ಪತ್ನಿ ಸುನೀತಾ ಸೇರಿದಂತೆ ೨೦ಕ್ಕೂ ಹೆಚ್ಚು ಜನರನ್ನು ಬಂಧಿಸಿ, ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟರು.
ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಭಕ್ತರ ಸಮ್ಮುಖದಲ್ಲಿ ಹೊಸ ಅರ್ಚಕರಿಂದ ಪೂಜೆ ನಡೆಯುತ್ತಿದ್ದರೆ, ಹಳೇ ಅರ್ಚಕರ ಕುಟುಂಬದ ಸದಸ್ಯರು ಹೊರಗಡೆ ರೋಧನೆ ನಡೆಸುತ್ತಿದ್ದರು