ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವಲ್ಲಿ ಬಿಜೆಪಿ ಅಸಮರ್ಥ : ರಾವಸಾಬ ಐಹೊಳೆ

ಅಥಣಿ :ನ.6: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು ಇನ್ನೂವರೆಗೆ ಬಿಜೆಪಿಯು ವಿರೋಧ ಪಕ್ಷ ನಾಯಕ ಆಯ್ಕೆ ಮಾಡದೆ ಸಂವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟು ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಮಾಡುತ್ತಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವಲ್ಲಿ ಬಿಜೆಪಿ ಅಸಮರ್ಥವಾಗಿದೆ. ನಾವಿಕನಿಲ್ಲದ ನೌಕೆ.. ನಾಯಕನಿಲ್ಲದ ಬಿಜೆಪಿ ಮುಳುಗುವುದು ನಿಶ್ಚಿತ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ ಲೇವಡಿ ಮಾಡಿದ್ದಾರೆ.

ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಬರಗಾಲ ತೀವ್ರತೆ ಹೆಚ್ಚಾಗಿರುವುದರಿಂದ ತುರ್ತು ಪರಿಸ್ಥಿತಿಯಂತಹ ಸಂದರ್ಭ ಎದುರಾಗಿದೆ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನುದಾನ ಕೊಡದೆ ಮೋಸ ಮಾಡುತ್ತಿದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಮುಖ ನೋಡಿ ವೋಟ್ ಕೇಳಿ ಆಯ್ಕೆಯಾದ ರಾಜ್ಯದ 25 ಬಿಜೆಪಿ ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತದೆ. ಕಾಣೆಯಾಗಿದ್ದಾರೆ. ಬಿಜೆಪಿ ಪಕ್ಷವು ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮೋದಿ ಮುಖ ನೋಡಿ ವೋಟ್ ಕೇಳುವ ನೈತಿಕತೆಯನ್ನು ಕಳೆದುಕೊಂಡಿದೆ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಆಡಳಿತ ಬಯಸಿ ಹೇಗೆ ಸಂಪೂರ್ಣ ಬಹುಮತ ನೀಡಿದ್ದಾರೂ ಹಾಗೇ ದೇಶದ ಜನತೆ ರಾಹುಲ್ ಗಾಂಧಿಯವರ ನಾಯಕತ್ವವನ್ನು ಬಯಸುತ್ತಿದ್ದಾರೆ. ದೇಶದಲ್ಲಿ ರಾಹುಲ್ ಗಾಂಧಿ ಪರವಾದ ಅಲೆ ಪ್ರಾರಂಭವಾಗಿದೆ. ಬಿಜೆಪಿ ಹಾಗೂ ಮೋದಿ ವಿರೋಧಿ ಅಲೆ ಶುರುವಾಗಿದೆ, ಎಂದು ಹೇಳಿದರು,
2024 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಕಾಂಗ್ರೆಸ್ ಪರ ನಿಲ್ಲಬೇಕಾಗಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವುದು ಖಚಿತ ಎಂದರು.