
ಕೋಲಾರ,ಮಾ,೧೫- ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಕಾಂಕ್ಷಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ವಿಚಾರವಾಗಿ ವಿರೋಧ ಪಕ್ಷಗಳು ದಿನನಿತ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇಂಥ ವಿಚಾರಗಳ ಕುರಿತು ಯಾರು ಕಿವಿ ಕೊಡಬೇಡಿ ಹಬ್ಬ ರೀತಿಯಲ್ಲಿ ಕಾಂಗ್ರೆಸ್ ಪ್ರಚಾರದ ಕಾರ್ಯಕ್ರಮಗಳನ್ನು ಆಚರಿಸುವಂತಾ ಬೇಕೆಂದು ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸಿದ್ದರಾಮಯ್ಯ ಅವರು ಮಾ.೨೦ ಮತ್ತು ೨೧ರಂದು ಎರಡು ದಿನಗಳು ಕೋಲಾರ ವಿಧಾನಸಭಾ ಕ್ಷೇತ್ರದ ಪ್ರವಾಸಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯರವರು ಕೋಲಾರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಕಾಂಕ್ಷಿಯಾಗಿ ಸ್ಪರ್ಧೆ ಮಾಡುತ್ತೇನೆಂದ ದಿನಗಳಿಂದ ವಿರೋಧಪಕ್ಷಗಳ ಮುಖಂಡರಿಗೆ ನಿದ್ರೆ ಇಲ್ಲದೆ, ಕನಸಿನಲ್ಲೂ ಬೆಚ್ಚಿ ಬೀಳುವಂತಾಗಿದೆ ಎಂದು ಟೀಕಿಸಿದರು,
ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರೋದಿಲ್ಲ, ಬಂದರೂ ಕೈಗೆ ಸಿಗೋದಿಲ್ಲ ಅಂತೆಲ್ಲಾ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರು ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸಿ ಇತಿಹಾಸ ಪುಟಗಳಲ್ಲಿ ಈ ಬಾರಿಯ ಸಿದ್ದರಾಮಯ್ಯ ಗೆಲುವು ದಾಖಲಾಗುವಂತೆ ಮಾಡಬೇಕಾಗಿರುವುದನ್ನು ಪ್ರತಿಯೊಬ್ಬ ಕಾಂಗ್ರೇಸ್ಸಿಗರ ಪ್ರತಿಷ್ಟೆಯ ಪ್ರಶ್ನೆಯಾಗಿ ಪರಿಗಣಿಸ ಬೇಕೆಂದು ತಿಳಿಸಿದರು
ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತ ಬಹು ದೊಡ್ಡ ಜವಾಬ್ದಾರಿಯನ್ನು ಅಖಿಲ ಭಾರತ ಕಾಂಗ್ರೇಸ್ ಸಮಿತಿ ನೀಡಿದೆ. ಅದರಂತೆ ಮಾ.೨೦ರಂದು ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ೮ ಗ್ರಾಪಂ ವ್ಯಾಪ್ತಿಯಲ್ಲಿ ಸಭೆಗಳು ನಡೆಯುತ್ತವೆ ಎಂದು ಹೇಳಿದರು.
ಮಾ.೨೧ ರಂದು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸುತ್ತಾರೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಮನೆ,ಮನೆ ಬಾಗಿಲಿಗೆ ತಿಳಿಸಬೇಕು. ಜೊತೆಗೆ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಮಾತನಾಡಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿನ ಕಾಂಗ್ರೇಸ್ ಪಕ್ಷವು ನೀಡಿದ್ದ ೧೬೫ ಭರವಸೆಗಳ ಪೈಕಿ ೧೫೯ ಭರವಸೆಗಳನ್ನು ಈಡೇರಿಸಿದ್ದಾರೆ. ಯಾರೋ ಹಸಿವಿನಿಂದ ಇರಬಾರದು ಎಂದು ಉಚಿತ ಪಡಿತರ, ಶೈಕ್ಷಣಿ ಅಭಿವೃದ್ದಿಗೆ ಹಲವಾರು ಯೋಜನೆಗಳು, ಶಾದಿ ಭಾಗ್ಯ, ಮಕ್ಕಳಿಗೆ ಕ್ಷೀರ ಭಾಗ್ಯ. ರೈತರ ಸಾಲ ಮನ್ನ, ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯಗಳು ಸೇರಿದಂತೆ ನೊರಾರು ಸೌಲಭ್ಯಗಳನ್ನು ಕಲ್ಪಿಸಿದ ಅಭಿವೃದ್ದಿಯ ಹರಿಕಾರ ಎಂದು ಶ್ಲಾಘಿಸಿದರು.
ಅದರೆ ಬಿಜೆಪಿ ಪಕ್ಷವು ಬಡವರ ಮೇಲೆ ತೆರಿಗೆ, ಗ್ಯಾಸ್ ಬೆಲೆ ಮೂರು ಪಟ್ಟು ಹೆಚ್ಚಿಸಿದೆ, ಪೆಟ್ರೋಲ್ ಬೆಲೆ ಏರಿಕೆ, ಬೆಂಕಿಪೊಟ್ಟಣ, ಮಕ್ಕಳು ಕುಡಿಯುವಂತ ಹಾಲಿನ ಮೇಲೂ ತೆರಿಗೆಗಳನ್ನು ಹಾಕಿರುವ ಬಿಜೆಪಿ ಸರ್ಕಾರ ರೈತರ ಸಾಲಗಳು, ಬಡವರ ಸಾಲಗಳನ್ನು ಮನ್ನ ಮಾಡದೆ ಅದಾನಿ,ಅಂಬಾನಿಯಂತ ಬಂಡಾವಳಷಾಹಿಗ ಲಕ್ಷಾಂತರ ಕೋಟಿ ರೂ ಮನ್ನ ಮಾಡುವ ಮೂಲಕ ಬಡಜನರ ವಿರೋಧಿ ಆಡಳಿತ ನಡೆಸುತ್ತಿರುವುದಕ್ಕೆ ನಾಚಿಕೆಯಾಗ ಬೇಕೆಂದು ಟೀಕಿಸಿದರು.
ನಿರುದ್ಯೋಗಿಗಳಿಗೆ ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ತಿಳಿಸಿದವರು ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗಿಗಳು ಉದ್ಯೋಗ ಕೇಳಿದರೆ ಪಕೋಡ ವ್ಯಾಪಾರ ಮಾಡಿ ಎಂದು ಉದ್ದಟತನ ಮಾತುಗಳಾಡಿದ್ದಾರೆ. ವಿದೇಶದ ಕಪ್ಪು ಹಣ ತಂದು ಪ್ರತಿ ಖಾತೆಗೆ ೧೫ ಲಕ್ಷ ರೂ ಹಾಕುವುದಾಗಿ ಭರವಸೆ ನೀಡಿದ್ದನ್ನು ಈಡೇರಿಸದೆ ವಂಚಿಸಿದ್ದಾರೆ. ಶೇ ೪೦ ರಷ್ಟು ಕಮೀಷನ್ ಬಹಿರಂಗವಾಗಿ ಪಡೆಯುತ್ತಿರುವುದು ಜನಜನಿತವಾಗಿದೆ. ಇಂಥಹ ಭ್ರಷ್ಟ ಸರ್ಕಾರ ಭಾರತದ ಇತಿಹಾಸದಲ್ಲೀ ಈವರೆಗೆ ಯಾರು ಕಂಡಿಲ್ಲ ಎಂದು ಕಿಡಿಕಾರಿದ ಅವರು ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಸುವಂತಾಗ ಬೇಕೆಂದರು,